ಹೊಸದಿಗಂತ ವರದಿ ಹುಬ್ಬಳ್ಳಿ:
ಕಾವೇರಿ ನೀರಿನ ವಿಚಾರವಾಗಿ ನ್ಯಾಯ ದೊರೆಯುವರೆಗೂ ಹೋರಾಟ ಮಾಡುತ್ತೇವೆ. ಸೆ. ೨೯ ರಂದು ನಡೆಯುವ ರಾಜ್ಯ ಬಂದ್ ಗೆ ನಮ್ಮದು ಸಂಪೂರ್ಣ ಬೆಂಬಲವಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ೧೦ ಕ್ಯೂಸೆಕ್ ನೀರು ಬಿಡುವ ಆದೇಶ ಬಂದಾಗ ಸರ್ಕಾರದ ಸುಪ್ರೀಂ ಕೋಟ್೯ ನಲ್ಲಿ ಸರಿಯಾಗಿ ವಾದ ಮಾಡಿದ್ದರೆ ಈಗ ತಮಿಳುನಾಡಿಗೆ ನೀರು ಬಿಡುವ ಪ್ರಸ್ತಾವ ಬರುತ್ತಿರಲಿಲ್ಲ ಎಂದರು.
ಜನ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಸರ್ಕಾರ ತಂದಿದೆ. ಈಗಾಗಲೇ ಸಾಕಷ್ಟು ನೀರು ತಮಿಳುನಾಡಿಗೆ ಬಿಡಲಾಗಿದೆ. ತಮಿಳುನಾಡು ಟ್ರಿಬ್ಯೂನಲ್ ಆದೇಶ ಉಲ್ಲಂಘಿಸಿದೆ ಎಂದು ತಿಳಿಸಿದರು.
ಕುಡಿಯುವ ನೀರಿಗೆ ಬಹುದೊಡ್ಡ ಹಾಹಾಕಾರ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸರ್ಕಾರ ಈ ಬಗ್ಗೆ ಖಾಳಜಿ ವಹಿಸಬೇಕು. ಈಗಲೂ ಸರ್ಕಾರ ಎಡವಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಬರಗಾಲವಿದೆ. ಮುಂಗಾರು ಬೆಳೆ ನಾಶವಾಗಿ ರೈತ ಕಂಗಾಲಾಗಿದ್ದಾರೆ. ಆದರೆ ಬೆಳೆ ಪರಿಹಾರದ ಬಗ್ಗೆ ಸರ್ಕಾರ ಯೋಚಿಸಿಲ್ಲ ಎಂದು ಹರಿಹಾಯ್ದರು.
ನಮ್ಮ ಸರ್ಕಾರದವಿದ್ದಾಗ ರಾಜ್ಯ ರೈತರಿಗೆ ಎರಡು ಪಟ್ಟು ಪರಿಹಾರ ನೀಡಿದ್ದೇವೆ. ಆದರೆ ಸರ್ಕಾರಕ್ಕೆ ರಾಜ್ಯದ ಬಗ್ಗೆ ಸ್ವಲ್ಪವು ಕಾಳಜಿ ಇಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ತನ್ನ ವರ್ಚಸ್ಸು ಕಳೆದುಕೊಂಡಿದೆ. ಹೀಗಾಗಿ ಆಪರೇಶನ್ ಕಾಂಗ್ರೆಸ್ ಗೆ ಮುಂದಾಗಿದೆ. ಟಿಕೆಟ್ ದೊರೆಯದವರು ಕಾಂಗ್ರೆಸ್ ಹೋಗುತ್ತಿದ್ದಾರೆ. ಅದರಿಂದ ಬಿಜೆಪಿ ಯಾವುದೇ ನಷ್ಟವಿಲ್ಲ. ಕಾಂಗ್ರೆಸ್ ಲಾಭವಿಲ್ಲ ಎಂದು ಹೇಳಿದರು.