ಹೊಸದಿಗಂತ ವರದಿ ಆಲೂರು :
ವರ್ತಮಾನದ ದಿನಮಾನಗಳಲ್ಲಿ ಮನುಷ್ಯನಿಗೆ ಆರೋಗ್ಯವೇ ಮಹಾಭಾಗ್ಯ. ಆರೋಗ್ಯಕ್ಕಿಂತ ದೊಡ್ಡ ಶ್ರೀಮಂತಿಕೆ ಮತ್ತೊಂದಿಲ್ಲ. ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರುವುದೇ ಜೀವನದ ಮಹತ್ಸಾಧನೆ ಎಂದು ಆಲೂರು ತಾಲ್ಲೂಕು ಆಸ್ಪತ್ರೆ ಆಡಳಿತಾದಿಕಾರಿ ಡಾ.ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ತಾಲ್ಲೂಕು ಆರೋಗ್ಯ ಇಲಾಖೆಯ ಸಹಕಾರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ತಾಲ್ಲೂಕು ಮಟ್ಟದ ಆರೋಗ್ಯ ಜಾಗೃತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಶಿಸ್ತು ಮತ್ತು ಸೇವೆಗೆ ಹೆಸರಾದುದು. ಇಲ್ಲಿನ ಸದಸ್ಯರು ಸಮಾಜಮುಖಿ ಕಾರ್ಯ ಮಾಡಲು ಉತ್ತಮ ಆರೋಗ್ಯ ಬಹಳ ಮುಖ್ಯ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಕೊಡುವ ಇಂತಹ ತರಬೇತಿಗಳು ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕಾರಿಯಾಗುವುದರ ಜೊತೆಗೆ ಆರೋಗ್ಯದ ಮುಂಜಾಗ್ರತಾ ಅರಿವನ್ನು ಮೂಡಿಸುತ್ತದೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಬೆವರಿಳಿಯುವ ಹಾಗೆ ಕೆಲಸ ಮಾಡುತ್ತಿದ್ದರು. ಆದರಿಂದು ಕುಳಿತಲ್ಲಿಯೇ ಕಾಲ ಕಳೆಯುವ ಮಂದಿಯೇ ಜಾಸ್ತಿ. ಆದ್ದರಿಂದ ದಿನಕ್ಕೆ ಕನಿಷ್ಟ ಅರ್ಧಗಂಟೆಯಾದರೂ ವ್ಯಾಯಾಮ ಅಥವಾ ಫಾಸ್ಟ್ ವಾಕಿಂಗ್ ಮಾಡಬೇಕು, ನಿಯಮಿತ ಆಹಾರ ಸೇವಿಸಬೇಕು. ಅಂದಾಗ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕ ಅಶ್ವಥ್ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕ ರುದ್ರೇಶ್,ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ ಮಾತನಾಡಿದರು ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ,ಆರೋಗ್ಯ ಶಿಕ್ಷಣಾದಿಕಾರಿ ಸತೀಶ್, ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ಖಜಾಂಚಿ ಬಿ.ಎಸ್.ಹಿಮ, ಸಹ ಕಾರ್ಯದರ್ಶಿ ಎಚ್.ಡಿ.ಕುಮಾರ್, ಗೈಡ್ ಕ್ಯಾಪ್ಟನ್ಸ್ ರೇಷ್ಮಾ ಹೊನ್ನೇನಹಳ್ಳಿ ಕೂಡಿಗೆ, ಭಾಗ್ಯಲಕ್ಷ್ಮಿ ಕಾಮತಿ ಕೂಡಿಗೆ, ಮಹೇರಾಬಾನು ವಾಟೆಹೊಳೆ, ಸುಜಾತ ಕವಳೀಕೆರೆ, ಜಿ. ಮಾರ್ಗರೇಟ್ ಕಣತೂರು, ಕುಮಾರಿ ಲತಾ ಆಲೂರು, ಬಲ್ಕೀಸ್ ಬಾನು, ಧನಲಕ್ಷ್ಮಿ ಕಾರಗೋಡು, ಸ್ಕೌಟ್ ಮಾಸ್ಟರ್‌ಗಳಾದ ವೆಂಕಟರಂಗಯ್ಯ ಆಲೂರು, ದೇವರಾಜು ಭೈರಾಪುರ, ಲಕ್ಷ್ಮಣ್ ಮರಸು ಹೊಸಹಳ್ಳಿ, ಪುಟ್ಟರಾಜು ಆಲೂರು ಸೇರಿದಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮರಸು ಹೊಸಹಳ್ಳಿಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಉಪಸ್ಥಿತರಿದ್ದರು.