Saturday, December 9, 2023

Latest Posts

ಸಾಂಪ್ರದಾಯಿಕ ಮರಳುಗಾರಿಕೆ ಆರಂಭಕ್ಕೆ ಸರ್ಕಾರದಿಂದ ವಿಳಂಬ ನೀತಿ: ಶಾಸಕ ವೇದವ್ಯಾಸ ಕಾಮತ್ ಆರೋಪ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ಆರಂಭಿಸುವ ವಿಚಾರದಲ್ಲಿ ಸರಕಾರ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದೆ. ಜಿಲ್ಲೆಯ ಜನತೆಯ ಈ ಸಂಕಷ್ಟಕ್ಕೆ ರಾಜ್ಯ ಸರಕಾರದ ನಿರ್ಲಕ್ಷ್ಯ, ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನವೇ ನೇರ ಕಾರಣ. ಜಿಲ್ಲೆಯ ಮರಳು ಸಮಸ್ಯೆಯನ್ನು ಸರಕಾರ ತಕ್ಷಣ ಬಗೆಹರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು.

ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡು ಹಲವು ತಿಂಗಳುಗಳೇ ಕಳೆದಿವೆ. ಈ ಬಾರಿಯ ಸರ್ವೆಯಲ್ಲಿ ನೇತ್ರಾವತಿ ಹಾಗೂ ಫಲ್ಗುಣಿ ನದಿಯಲ್ಲಿ ಹೊಸದಾಗಿ ಗುರುತಿಸಿರುವ ಮರಳು ದಿಬ್ಬಗಳ ವರದಿಯ ಬಗ್ಗೆ ಎನ್‌ಐಟಿಕೆ ಸಲ್ಲಿಸಿರುವ ತಾಂತ್ರಿಕ ವರದಿಯನ್ನು ಜಿಲ್ಲಾಕಾರಿ ಅಧ್ಯಕ್ಷತೆಯಲ್ಲಿರುವ ಸಿಆರ್‌ಝಡ್ ಸಮಿತಿ, ಪರಿಶೀಲನೆ ನಡೆಸಿ ಮರಳುಗಾರಿಕೆಗೆ ಅನುಮತಿಸುವ ಬಗ್ಗೆ ಬೆಂಗಳೂರಿನ ಕೆಸಿಝಡ್‌ಎಂಎಗೆ ಕಳುಹಿಸಿಕೊಡಲಾಗಿದೆ. ಆದರೆ, ನಿಗದಿತ ಸಮಯದೊಳಗೆ ಸಭೆ ನಡೆಸಿ ಅನುಮತಿ ನೀಡದೇ ಅನಗತ್ಯ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಮರಳು ಲಭ್ಯತೆ ಇಲ್ಲದ ಬಗ್ಗೆ ಈಗಾಗಲೇ ಗುತ್ತಿಗೆದಾರರ ಸಂಘ ದೂರಿಕೊಂಡಿದೆ. ನಿರ್ಮಾಣ ಕಾಮಗಾರಿ ಸ್ಥಗಿತಗೊಂಡರೆ ಕಾರ್ಮಿಕರೂ ಸಂಕಷ್ಟ ಎದುರಿಸುತ್ತಾರೆ. ದುಬಾರಿ ದರದಿಂದಾಗಿ ಜನಸಾಮಾನ್ಯರಿಗೆ ಮರಳು ಖರೀದಿಸಲೂ ಆಗುತ್ತಿಲ್ಲ. ಅಕ್ರಮ ಮರಳುಗಾರಿಕೆಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.

ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಮಹಾತ್ಮಾ ಗಾಂ ನಗರ ವಿಕಾಸ ಯೋಜನೆಯಡಿಯಲ್ಲಿ 125 ಕೋಟಿ ರೂ. ಅನುದಾನವನ್ನು ತರಲಾಗಿತ್ತು. ಮಳೆ ಹಾನಿಯಿಂದ ಕ್ಷೇತ್ರದ ಅಲ್ಲಲ್ಲಿ ರಸ್ತೆ, ಚರಂಡಿ ಸಮಸ್ಯೆ ಉಂಟಾಗಿದ್ದು, ಮೂಲಭೂತ ಸೌಕರ್ಯ ಮರು ಕಲ್ಪಿಸಲು 20 ಕೋಟಿ ರೂ. ವಿಶೇಷ ಅನುದಾನವನ್ನು ತರಲಾಗಿತ್ತು. ಪ್ರಸ್ತುತ ಈ ಎಲ್ಲ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಅಮೃತ ಯೋಜನೆ, ಕುಡ್ಸೆಂಪ್ ಯೋಜನೆಯ ಕಾಮಗಾರಿಗಳೂ ಅರ್ಧಕ್ಕೆ ನಿಂತಿವೆ. ಪಾಲಿಕೆ ವ್ಯಾಪ್ತಿಯಲ್ಲಿ 792 ಕೋಟಿ ರೂ. ಕುಡಿಯುವ ನೀರಿನ ಜಲಸಿರಿ ಯೋಜನೆ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದರು.

ಮಂಗಳೂರಿನಲ್ಲಿ ಆಸ್ತಿ ಮಾರಾಟ ಹಾಗೂ ಖರೀದಿಸುವ ಸಂದರ್ಭದಲ್ಲಿ ಮಿನಿ ವಿಧಾನಸೌಧದ ಉಪನೋಂದಣಿ ಕಚೇರಿಯಲ್ಲಿ ಬಯೋಮೆಟ್ರಿಕ್ ನೀಡಿದ ನಂತರ ಕೆಲವೇ ಗಂಟೆಗಳಲ್ಲಿ ಸಾರ್ವಜನಿಕರುಗಳ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ಡ್ರಾ ಆಗಿ ವಂಚನೆಯಾಗಿದ್ದ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಗಮನಕ್ಕೆ ತರಲಾಗಿದ್ದರೂ, ಈವರೆಗೂ ಹಣ ಕಳೆದುಕೊಂಡವರಿಗೆ ನ್ಯಾಯ ಸಿಕ್ಕಿಲ್ಲ ಎಂದು ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಉಂಟಾಗಿರುವ ಇ-ಖಾತಾ ಸಮಸ್ಯೆಯನ್ನು ಆದ್ಯತೆ ಮೇರೆಗೆ ಅತ್ಯಂತ ತುರ್ತಾಗಿ ಸರಿಪಡಿಸಿಕೊಡುವಂತೆ ಅ.13 ರಂದು ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಆದರೆ ಈವರೆಗೂ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!