October 18, 2026
Sunday, October 18, 2026
spot_img

ಅತ್ತ ಮುಂಗಾರು ಮಳೆಯೂ ಇಲ್ಲ, ಇತ್ತ ಕಡಲಿನಲ್ಲಿ ಮೀನೂ ಇಲ್ಲ: ಕರಾವಳಿಯಲ್ಲಿ ಸಂಕಷ್ಟಕ್ಕೆ ಸಿಲುಕಿದೆ ಮೀನುಗಾರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರಾವಳಿ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇನ್ನು ಕೂಡಾ ಮುಂಗಾರು ಮಳೆ ಆರಂಭವಾಗದಿರುವುದು ಮೀನುಗಾರಿಕೆ ಕ್ಷೇತ್ರದ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಬೀರಿದೆ.

ಸಮುದ್ರದಲ್ಲಿ ಸಾಕಷ್ಟು ಮಳೆಯಾಗದ ಕಾರಣ ಮೀನುಗಳು ಆಳ ಸಮುದ್ರದಲ್ಲೇ ಉಳಿದಿದ್ದು, ಕರಾವಳಿ ಭಾಗದಲ್ಲಿ ಮೀನಿನ ಲಭ್ಯತೆ ಕಡಿಮೆಯಾಗಿ ನಾಡದೋಣಿ ಮೀನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ.

ಘಟ್ಟ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿ ಸಿಹಿನೀರು ಸಮುದ್ರ ಸೇರುವಾಗ ಉಂಟಾಗುವ ನೀರಿನ ಬದಲಾವಣೆಯಿಂದ ಬಂಗಡೆ, ಚಿಂಡಿ ಸೇರಿದಂತೆ ಹಲವು ಮೀನುಗಳು ದಡದತ್ತ ಬರುತ್ತವೆ. ಆದರೆ ಈ ಬಾರಿ ಮಳೆಯ ಕೊರತೆಯಿಂದ ಆ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಮೀನುಗಾರರು ಹೇಳಿದ್ದಾರೆ.

ಇದನ್ನೂ ಓದಿ:

ಮಂಗಳೂರಿನಿಂದ ಉಳ್ಳಾಲದವರೆಗಿನ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಚಟುವಟಿಕೆಗಳು ಕುಂಠಿತಗೊಂಡಿದ್ದು, ಇದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಮೀನಿನ ಕೊರತೆ ಉಂಟಾಗಿ ಬಂಗಡೆ ಸೇರಿದಂತೆ ಹಲವು ಮೀನುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ.

ಮಳೆ ಕೊರತೆಯ ಪರಿಸ್ಥಿತಿ ಮುಂದುವರಿದರೆ ಸ್ಥಳೀಯ ಮೀನಿನ ಪೂರೈಕೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದ್ದು, ಪಕ್ಕದ ರಾಜ್ಯಗಳಿಂದ ಬರುವ ಐಸ್ ಮೀನುಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಹವಾಮಾನ ಇಲಾಖೆಯು ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮೀನುಗಾರರಲ್ಲಿ ಅನಿಶ್ಚಿತತೆ ಹೆಚ್ಚಿದೆ. ಮೀನುಗಾರಿಕೆ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳಲು ಇನ್ನೂ ಕೆಲವು ವಾರಗಳು ಬೇಕಾಗಬಹುದು ಎಂದು ಮೀನುಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Must Read