ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್ಗಳ ಬಳಕೆ ಹೆಚ್ಚಾಗಿದ್ದು, ಅಲ್ಲಲ್ಲೇ ಚಾರ್ಜಿಂಗ್ ಸ್ಟೇಷನ್ಗಳು ನಿರ್ಮಾಣವಾಗಿದೆ. ಆದರೆ ಈ ದೇಶ ಒಂದು ಹೆಜ್ಜೆ ಮುಂದೆ ಹೋಗಿ ವೈರ್ಲೆಸ್ ಚಾರ್ಜಿಂಗ್ ರಸ್ತೆಗಳ ನಿರ್ಮಾಣಕ್ಕೆ ಮುಂದಾಗಿದೆ.
ಎಲೆಕ್ಟ್ರಿಕ್ ವಾಹನಗಳ ಜಾರ್ಜಿಂಗ್ ಸ್ಟೇಷನ್ಗಳ ಮುಂದುವರೆದ ಭಾಗವಾಗಿ ವೈರ್ಲೆಸ್ ಜಾರ್ಜಿಂಗ್ ಮಾಡುವತ್ತ ಅನ್ವೇಷಣೆ ನಡೆಯುತ್ತಾ ಬಂದಿದೆ. ಅಚ್ಚರಿಯೆಂದರೆ ನಾರ್ವೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ಗಾಗಿ ವೈರ್ಲೆಸ್ ಚಾರ್ಜಿಂಗ್ ರಸ್ತೆಯನ್ನೇ ನಿರ್ಮಿಸಲಾಗಿದೆ.
ಇಸ್ರೇಲಿ ಹೈಟೆಕ್ ಕಂಪನಿಯಾದ ಎಲೆಕ್ಟ್ರಿಯಾನ್ ವೈರ್ಲೆಸ್ ಇಂತಹದೊಂದು ಅನ್ವೇಷನೆ ನಡೆಸಿ ಚಾಲನೆಗೆ ತಂದಿದೆ. ಎಲೆಕ್ಟ್ರಿಕ್ ವಾಹನ ಚಾಲಕರು ಚಾಲನೆಯಲ್ಲಿಯೇ ವಾಹನಗಳನ್ನು ಚಾರ್ಜ್ ಮಾಡಬಹುದಾದ ರಸ್ತೆಯನ್ನು ಈ ಕಂಪನಿ ನಿರ್ಮಿಸಿದೆ.
ರಸ್ತೆಯ ಮೇಲ್ಭಾಗದಲ್ಲಿ ವಿಶೇಷ ತಾಮ್ರದ ಪಟ್ಟಿಗಳನ್ನು ಬಳಸಿಕೊಂಡು ಅದರ ಮೂಲಕ ವಾಹನಗಳು ಚಲಿಸುವಾಗ ಚಾರ್ಜ್ ಆಗುತ್ತದೆ. 100 ಮೀಟರ್ ಉದ್ದದ ಹೊಸ ತಂತ್ರಜ್ಞಾನವನ್ನು ಎಲೆಕ್ಟ್ರಿಯಾನ್ ಕಂಪನಿ ಟ್ರೋಂಡ್ಹೈಮ್ನಲ್ಲಿ ನಿರ್ಮಿಸಿದೆ. ಮಾಹಿತಿ ಪ್ರಕಾರ ಒಂದು ವರ್ಷದವರೆಗೆ ಹೊಸ ತಂತ್ರಜ್ಞಾನದ ಬಗ್ಗೆ ನಿಗಾವಹಿಸಲಿದೆ.
ಚೀನಾದ ಯುಟಾಂಗ್ ಕಂಪನಿ ತಯಾರಿಸಿದ ಮೂರು ಎಲೆಕ್ಟ್ರಿಕ್ ಬಸ್ ಮತ್ತು ಮತ್ತೊಂದು ತಯಾರಿಕ ಕಂಪನಿಯಾದ ಹೈಗರ್ನಿಂದ ತಯಾರಿದ ಬಸ್ಸನ್ನು ಬಳಸಿಕೊಂಡು ಪ್ರಯೋಗ ನಡೆಸಲಾಗುತ್ತಿದೆ. ಒಂದು ವೇಳೆ ಈ ಪ್ರಯೋಗ ಸಕ್ಸಸ್ ಆದರೆ ವೈರ್ಲೆಸ್ ರಸ್ತೆ ಅಭಿವೃದ್ಧಿ ಪಡಿಸುವ ಸಾಧ್ಯತೆ ಇದೆ.