ಹೊಸದಿಗಂತ ವರದಿ ಬೆಳಗಾವಿ:
ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಎಂದು ಪ್ರಧಾನಿ ಮೋದಿಯವರಾಗಲಿ, ಜೆ.ಪಿ. ನಡ್ಡಾ, ಅಮಿತ್ ಶಾ ಕೂಡ ಹೇಳಿಲ್ಲ. ಇದೆಲ್ಲಾ ಊಹಾಪೋಹ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರ್ನಾಲ್ಕು ದಿನಗಳಲ್ಲಿ ಪಟ್ಟಿ ಬಿಡುಗಡೆ ಆಗಲಿದೆ. ಆಗ ಸತ್ಯ ಹೊರಬರುತ್ತದೆ ಎಂದರು.
ಬಿಜೆಪಿ ಗೆಲ್ಲುವ ಪಕ್ಷ. ಹೀಗಾಗಿ, ಬಹಳಷ್ಟು ಆಕಾಂಕ್ಷಿಗಳು ಟಿಕೆಟ್ ಕೇಳುವುದು ಸಹಜ. ಟಿಕೆಟ್ ಕೇಳುವುದು ತಪ್ಪಲ್ಲ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಟಿಕೆಟ್ ಕೇಳುವ ಹಕ್ಕಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಕೇಂದ್ರ ಚುನಾವಣೆ ಮಂಡಳಿಯಿದೆ. ಯಾರಿಗೆ ಟಿಕೆಟ್ ಕೊಡಬೇಕೆಂದ ಕುರಿತು ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೈ ಟಿಕೆಟ್ ತಪ್ಪುವ ಭೀತಿ ಇಲ್ಲ. ಈ ಬಗ್ಗೆ ಪಿತೂರಿ ನಡಿತಿದೆ ಎಂಬುದು ಗೊತ್ತಿಲ್ಲ. ಆದರೆ, ಪಕ್ಷದ ನಾಯಕರೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಾಹಿತಿ ಸಂಗ್ರಹದಿಂದ ನನಗೆ ಅನುಕೂಲ ಆಗಲಿದೆಯೇ ಹೊರತು ಕೆಟ್ಟದಾಗಲ್ಲ ಎಂದು ಹೇಳಿದರು.
ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ. 10 ವರ್ಷಗಳ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತೇವೆ. ದೇಶದಲ್ಲಿ ಆದಂಥ ಮೂಲಸೌಕರ್ಯ ಅಭಿವೃದ್ಧಿ, ಗ್ರಾಮೀಣ ಭಾಗಕ್ಕೆ ಸಿಕ್ಕ ನೆರವು ಇದು ನಮ್ಮ ಶಕ್ತಿ. ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು, ದೇಶದ ಬಗ್ಗೆ ಅವರಿಗಿರುವ ಕಳಕಳಿ, ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ಮೋದಿಗಿರುವ ದೂರದೃಷ್ಟಿ, ವಿದೇಶದಲ್ಲಿರುವ ಭಾರತೀಯರಿಗೆ ಗೌರವದ ದೂರದೃಷ್ಟಿ ಮೇಲೆ ಮತ ಕೇಳುತ್ತೇವೆ ಎಂದು ಹೇಳಿದರು.
ಈರುಳ್ಳಿ, ಟೊಮೊಟೊ ಸಲುವಾಗಿ ಸರ್ಕಾರ ಬಿದ್ದ ಉದಾಹರಣೆ ಇವೆ. ಅದಕ್ಕೆ ಖಾದ್ಯತೈಲ ಕಾಲು ಬೆಳೆಯಲು ರೈತರಿಗೆ ಉತ್ತೇಜನ ನೀಡಲಾಗುತ್ತಿದೆ. ಸಬ್ಸಿಡಿ ಆಧಾರದ ಮೇಲೆ ರೈತರಿಗೆ ಬೀಜ, ಟೆಕ್ನಾಲಜಿ ನೀಡುತ್ತಿದ್ದೇವೆ. ಯುಪಿಎ ಸಮಯದಲ್ಲಿನ ಲೋಪಗಳ ಗುಂಡಿ ಮುಚ್ಚಿ ಮೇಲೆದ್ದು ಬರಲು ನಮಗೆ ಸಮಯ ಬೇಕು. ಎಲ್ಲ ವಿಚಾರಗಳಲ್ಲಿ ಸ್ವಾವಲಂಬನೆ ಸಾಧಿಸಲು ಮೋದಿ ಕಾರ್ಯ ಪ್ರವೃತರಾಗುತ್ತಿದ್ದಾರೆ.
ರಾಜ್ಯ ಸರ್ಕಾರ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ ಸರ್ಕಾರ ಆಗಿದೆ. ನಿಷೇಧಿತ ಸಂಘಟನೆ ಮುಖಂಡರೆಲ್ಲಾ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಮನೆಯಲ್ಲೆ ಇರುತ್ತಾರೆ. ಹಾಗಾಗಿ, ಅವರ ಮೇಲೆ ಕ್ರಮ ತೆಗೆದುಕೊಳ್ಳುವುದು ಕೂಡ ಪೊಲೀಸ್ ಇಲಾಖೆಗೆ ಸವಾಲಾಗಿದೆ. ವಿಧಾನಸೌಧದಲ್ಲೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಬೆಂಗಳೂರಿನ ಕ್ಯಾಂಟಿನ್ ನಲ್ಲಿ ಬಾಂಬ್ ಸ್ಫೋಟ ಪ್ರಕರಣಗಳೇ ಇದಕ್ಕೆಲ್ಲಾ ಸಾಕ್ಷಿ. ಆದ್ದರಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಯೋತ್ಪಾದಕರ ರಕ್ಷಣೆ ಮಾಡುವ ಸರ್ಕಾರ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.