ಹೊಸದಿಗಂತ ವರದಿ ಉಡುಪಿ:
ಶಿವಮೊಗ್ಗದಲ್ಲಿ ನಡೆದಿರುವುದು ಕೋಮುಗಲಭೆ ಅಲ್ಲ, ಅದು ವ್ಯವಸ್ಥಿತವಾಗಿ ಹಿಂದೂಗಳ ಮೇಲೆ ಜಿಹಾದಿಗಳು ನಡೆಸಿದ ದಾಳಿ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಬಜರಂಗದಳ ಸಂಯೋಜಕ ಸುನೀಲ್ ಕೆ.ಆರ್ ಆರೋಪಿಸಿದ್ದಾರೆ.
ಅವರು ಶನಿವಾರ, ಉಡುಪಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಬಹುಸಂಖ್ಯಾತ ಹಿಂದೂಗಳ ಮೇಲೆ ಆಕ್ರಮಣ ಮಾಡಲು ಶಿವಮೊಗ್ಗದಲ್ಲಿ ಜಿಹಾದಿಗಳು ಸಂಚು ರೂಪಿಸಿದ್ದರು. ತಲ್ವಾರ್ ಹಿಡಿದು ಪ್ರದರ್ಶನ ಮಾಡಿದರೂ, ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಭಾರತ ದೇಶಕ್ಕೆ ದಾಳಿಕೋರನಾಗಿ ನುಸುಳಿದ ಔರಂಗಜೇಬನನ್ನು ದೊರೆ ಎಂದು ದ್ವಾರ ನಿರ್ಮಿಸಲು ಅನುಮತಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ನಡೆಯುವ ಹಿಂದೂ ಸಮಾಜೋತ್ಸವದ ಪ್ರಯುಕ್ತ ಕೇಸರಿ ಭಾವುಟ ಹಾಕಿರುವುದಕ್ಕೆ ಆಕ್ಷೇಪಗಳು ಬಂದಿದೆ. ಅನುಮತಿ ಕಡ್ಡಾಯ ಎಂದು ಇಲಾಖೆ ತಿಳಿಸಿದೆ. ಬಹುಸಂಖ್ಯಾತರ ಭಾವನೆಗಳಿಗೆ ಸರಕಾರ ಘಾಸಿಗೊಳಿಸುತ್ತಿದೆ. ತ್ಯಾಗದ ಸಂಕೇತವಾದ ಕೇಸರಿಯನ್ನು ಹಾಕಲು ಅನುಮತಿಗಳು ಕಡ್ಡಾಯವಾಗಿರುವುದು ಈ ದೇಶದ ಬಹುದೊಡ್ಡ ದುರಂತ ಎಂದು ದುಃಖಿಸಿದರು.