ಹೊಸದಿಗಂತ ವರದಿ ಶಿವಮೊಗ್ಗ:
ಸರ್ಕಾರಿ ಇಲಾಖೆಗಳ ಬಗ್ಗೆ ದೂರು ಹೊತ್ತು ಸಾಕಷ್ಟು ಜನರು ಬರಬಹುದು ಎಂದು ಅಧಿಕಾರಿಗಳು ಸಿದ್ಧರಾಗಿ ಬಂದಿದ್ದರು. ಆದರೆ ಅಲ್ಲಿ ಒಂದೂ ದೂರು ಬರಲಿಲ್ಲ !
ಶಿವಮೊಗ್ಗ ಲೋಕಾಯುಕ್ತದಿಂದ ಇಲ್ಲಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಹಾಗೂ ತಾಲೂಕಿಗೆ ಸಂಬಂದಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಆದರೆ ದೂರುದಾರರು ಮಾತ್ರ ಯಾರೂ ಇರಲಿಲ್ಲ!
ಈ ಕುರಿತು ಸಭೆಯಲ್ಲಿ ಮಾತನಾಡಿದ ಲೋಕಾಯಕ್ತ ಡಿವೈಎಸ್‌ಪಿ ಉಮೇಶ್ ಈಶ್ವರ ನಾಯ್ಕ್, ಅಹವಾಲು ಸ್ವೀಕಾರ ಸಭೆ ಕುರಿತು ಪ್ರಚಾರ ಸರಿಯಾಗಿ ನಡೆದಿಲ್ಲ ಎಂದು ತಾಪಂ ಇಒ ಅವಿನಾಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದುವರೆಗೂ ಶಿವಮೊಗ್ಗ ತಾಲೂಕಿನಲ್ಲಿಒ ಸರಿಯಾಗಿ ಸಭೆ ನಡೆಸಲು ಆಗಿಲ್ಲ. ಇನ್ನು ಮುಂದೆ ಪ್ರತಿ ತಿಂಗಳೂ ಸಭೆ ನಡೆಸಿ ಜನರಿಂದ ದೂರು ಸ್ವೀಕರಿಸಲಾಗುವುದು. ಸಭೆಯಲ್ಲಿ ದೂರು ಬಂದಿಲ್ಲ ಎಂದ ಮಾತ್ರಕ್ಕೆ ಎಲ್ಲವೂ ಸರಿ ಇದೆ ಎಂದು ಅರ್ಥವಲ್ಲ. ಎಲ್ಲಾ ಕಡೆಯೂ ನ್ಯೂನತೆ ಇದೆ. ಅದನ್ನು ನೀವೇ ಸರಿಪಡಿಸಿಕೊಳ್ಳಿ. ಲೋಕಾಯುಕ್ತ ದಾಳಿ ನಡೆದು ಸಿಕ್ಕಬಿದ್ದರೆ ಅಧಿಕಾರಿಗಳು ಜೀವನ ಪರ್ಯಂತ ಕಪ್ಪು ಚುಕ್ಕೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಎನ್.ಜೆ.ನಾಗರಾಜ್, ಇಒ ಅವಿನಾಶ್, ಲೋಕಾಯುಕ್ತ ಇನ್ಸ್‌ಪೆಕ್ಟರ್ ಸುರೇಶ್,ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.