ಹೊಸದಿಗಂತ ವಿಜಯಪುರ:
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ನಶಿಸಿ ಹೋಗುವ ಪರಿಸ್ಥಿತಿ ಬರುತ್ತದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಕಾಂಗ್ರೆಸ್ ದೆಹಲಿಯಲ್ಲಿ ಶೂನ್ಯ ಸಾಧನೆ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಎಲ್ಲಿಯವರೆಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸದ್ಯ ಪ್ರಿಯಾಂಕಾ ಗಾಂಧಿ ಸರ್ವಾಧಿಕಾರಿ ಧೋರಣೆ ಮಾಡುತ್ತಾರೋ, ಅಲ್ಲಿಯವರೆಗೂ ಇದೆ ಪರಿಸ್ಥಿತಿ ಬರಲಿದೆ ಎಂದರು.
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಸಾಧಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಸ್ವಾತಂತ್ರ್ಯ ಬಂದು 75 ವರ್ಷದ ಇತಿಹಾಸದಲ್ಲಿ ಕೇಜ್ರೀವಾಲ್ ಎಂಬ ಒಬ್ಬ ವ್ಯಕ್ತಿ, ಆಮ್ ಆದ್ಮೀ ಎಂಬ ಪಕ್ಷ ಕಟ್ಟಿ ದೇಶದ ಚುನಾವಣಾ ವ್ಯವಸ್ಥೆ ಬುಡಮೇಲು ಮಾಡಿದ್ದರು. ಸುಳ್ಳು ಆಶ್ವಾಸನೆ ನೀಡಿ ಜನರಿಗೆ ಮೋಸ ಮಾಡಿದ ಮಹಾ ದ್ರೋಹಿ ಕೇಜ್ರೀವಾಲ್ ಎಂದು ಹರಿಹಾಯ್ದರು.
ಇಡೀ ಪ್ರಪಂಚದಲ್ಲಿ ಯಾವುದೇ ಸರ್ಕಾರ ಮಾಡದಿರುವಷ್ಟು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದರು. ಜೈಲಿನಲ್ಲೆ ಕುಳಿತು, ರಾಜೀನಾಮೆ ನೀಡದೇ ಆಡಳಿತ ಮಾಡಿದ ಸಂವಿಧಾನ ದ್ರೋಹಿ ಅವರು ದೂರಿದರು.
ಬಡ ಬಗ್ಗರು ಇಂದು ದೆಹಲಿಯಲ್ಲಿ ರಸ್ತೆಯ ಮೆಲೆಯೇ ಇದ್ದಾರೆ. ಹಗಲು ದರೋಡೆ ಮಾಡಿದ ಒಬ್ಬ ಹೀನ ಮನಸ್ಥಿತಿಯ ರಾಜಕಾರಣಿ ಕೇಜ್ರೀವಾಲ್. ದೆಹಲಿಯ ಜನರು ಕೇಜ್ರೀವಾಲ್ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಹೆಚ್ಚು ಟ್ಯಾಕ್ಸ್ ಬರುವ ಪ್ರದೇಶದಲ್ಲಿ ಹೆಚ್ಚು ಅಭಿವೃದ್ಧಿ ಮಾಡಬೇಕಿತ್ತು, ಆದರೆ ಅಲ್ಲಿ ಓಡಾಡಲು ಆಗದ ಸ್ಥಿತಿ ಇದೆ. ಸರ್ಕಾರದ ಖಜಾನೆ ಹಗಲು ದರೋಡೆ ಮಾಡಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಪಕ್ಷದ ವ್ಯವಸ್ಥೆಯಲ್ಲಿ ಇದ್ದೇವೆ. ಪಕ್ಷದ ನಿರ್ಣಯವೇ ಅಂತಿಮ, ಈ ಸಮಸ್ಯೆ ಸರಿ ಮಾಡುವ ಕೆಲಸ ದೆಹಲಿ ನಾಯಕರು ಮಾಡುತ್ತಾರೆ. ನಮ್ಮದೊಂದು ರಾಷ್ಟ್ರೀಯ ಪಕ್ಷ, ನಾನೇನು ಯಾರಿಗೂ ಸಲಹೆ ಕೊಡಲ್ಲ ಎಂದರು.