Sunday, August 14, 2022

Latest Posts

ಭಾರತದ ರಾಮ್ಸರ್‌ ಪ್ರದೇಶಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿವೆ ಈ ಐದು ಜೌಗು ಪ್ರದೇಶಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
ಬಾರತವು ಐದು ಹೊಸ ರಾಮ್ಸರ್‌ ಮಾನ್ಯತೆಯ ಜೌಗು ಪ್ರದೇಶಗಳನ್ನು ಗೊತ್ತುಪಡಿಸಿದ್ದು ದೇಶದ ಒಟ್ಟು ರಾಮ್ಸರ್ ಸೈಟ್‌ ಗಳ ಸಂಖ್ಯೆ 54 ಕ್ಕೆ ಏರಿಕೆಯಾಗಿದೆ.

ಹೊಸದಾಗಿ ಸೇರ್ಪಡೆಯಾದ ಜೌಗು ಪ್ರದೇಶಗಳೆಂದರೆ ಕರಿಕಿಲಿ ಪಕ್ಷಿಧಾಮ, ಪಲ್ಲಿಕರನೈ ಮಾರ್ಷ್ ರಿಸರ್ವ್ ಫಾರೆಸ್ಟ್, ತಮಿಳುನಾಡಿನ ಪಿಚವರಂ ಮ್ಯಾಂಗ್ರೋವ್ ಕಾಡುಗಳು, ಮಿಜೋರಾಂನ ಪಾಲಾ ವೆಟ್ಲ್ಯಾಂಡ್ ಹಾಗೂ ಮಧ್ಯಪ್ರದೇಶದ ಸಖ್ಯ ಸಾಗರ್ ಪ್ರದೇಶ.ಈ ಹಿಂದೆ ಫೆಬ್ರವರಿ 2 ರಂದು ವಿಶ್ವ ತೇವಭೂಮಿ ದಿನದ ಸಂದರ್ಭದಲ್ಲಿ, ಭಾರತವು ಗುಜರಾತ್‌ನ ಖಿಜಾಡಿಯಾ ವನ್ಯಜೀವಿ ಅಭಯಾರಣ್ಯ ಮತ್ತು ಉತ್ತರ ಪ್ರದೇಶದ ಬಖೀರಾ ವನ್ಯಜೀವಿ ಅಭಯಾರಣ್ಯವನ್ನು ಭಾರತದ ರಾಮ್‌ಸರ್ ಸೈಟ್‌ಗಳ ಪಟ್ಟಿಗೆ ಸೇರಿಸಿದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರು, ತೇವಭೂಮಿಗಳ ಅವನತಿ ಮತ್ತು ನಷ್ಟವನ್ನು ತಡೆಯಲು ಮತ್ತು ಹಿಮ್ಮೆಟ್ಟಿಸಲು ಸರ್ಕಾರವು ಸಮುದಾಯಗಳು ಮತ್ತು ನಾಗರಿಕರನ್ನು ಒಳಗೊಂಡಿರುವ ಸಕಾರಾತ್ಮಕ ಕ್ರಮವನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಆರ್ದ್ರಭೂಮಿಗಳ ಕುರಿತಾದ ರಾಮ್ಸರ್ ಕನ್ವೆನ್ಷನ್ ವರದಿಯ ಪ್ರಕಾರ, ಜೌಗು ಪ್ರದೇಶಗಳು ಕಾಡುಗಳಿಗಿಂತ ಮೂರು ಪಟ್ಟು ವೇಗವಾಗಿ ಕಣ್ಮರೆಯಾಗುತ್ತಿವೆ, 1970 ರಿಂದ 2015 ರವೆರೆಗೆ 35% ರಷ್ಟು ತೇವ ಪ್ರದೇಶಗಳು ಕಳೆದುಹೋಗಿವೆ.

ಏನಿವು ರಾಮ್ಸರ್‌ ಸೈಟ್‌ ಅಥವಾ ರಾಮ್ಸರ್‌ ಜೌಗು ಪ್ರದೇಶ ?
ಪ್ರಸ್ತುತ ಹೆಚ್ಚುತ್ತಿರುವ ಪರಿಸರ ನಾಶ, ಅರಣ್ಯ ನಾಶಗಳನ್ನು ತಡೆಗಟ್ಟಿ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಉಳಿಸುವ ದೃಷ್ಟಿಯಿಂದ ಜೌಗು ಪ್ರದೇಶಗಳ ಉಳಿವಿಗೆ ಅಂತರಾಷ್ಟ್ರೀಯ ಸಮಾವೇಶವನ್ನು ನಡೆಸಲಾಗಿದೆ. ಇದರಲ್ಲಿ ಜೌಗು ಪ್ರದೇಶಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯನ್ನು ಗುರಿಯಾಗಿಸಿಕೊಳ್ಳಲಾಗಿದೆ. ಇರಾನ್‌ ನ ರಾಮ್ಸರ್‌ ನಗರದಲ್ಲಿ ಈ ಸಮಾವೇಶವು ನಡೆದಿದ್ದು ಇದೇ ನಗರದ ಹೆಸರನ್ನು ಇಡಲಾಗಿದೆ. ಈ ಸಮಾವೇಶಕ್ಕೆ 1971 ರಲ್ಲಿ ಭಾರತವು ಸಹಿ ಹಾಕಿದೆ.

ಇವುಗಳ ಪ್ರಾಮುಖ್ಯತೆಯೇನು ?
ನೈಸರ್ಗಿಕ ಪರಿಸರದಲ್ಲಿ ಜೌಗು ಪ್ರದೇಶಗಳು ಅಥವಾ ಆರ್ದ್ರ ಭೂಮಿಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು ಇಡೀ ಪರಿಸರ ವ್ಯವಸ್ಥೆಯ ಜೀವಾಳಗಳು ಎನ್ನಲಾಗುತ್ತದೆ. ವಿಶ್ವದ 40% ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ಆರ್ದ್ರಭೂಮಿಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಜೌಗು ಪ್ರದೇಶಗಳು ವಲಸೆ ಹಕ್ಕಿಗಳಿಗೆ ಪ್ರಮುಖ ಆಹಾರ ಮತ್ತು ಸಂತಾನೋತ್ಪತ್ತಿ ಸ್ಥಳಗಳಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss