ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೂ ಹೈಸ್ಕೂಲ್ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳನ್ನು ಎರಡು ತಾಸು ಐಪಿಎಸ್ ಅಧಿಕಾರಿ ಹುದ್ದೆಯಲ್ಲಿ ಕೂರಿಸಿ, ಪುಟಾಣಿಗಳ ಕನಸು ನನಸಾಗಿಸುವ ಮೂಲಕ ಬೆಂಗಳೂರು ಪೊಲೀಸರು ತಾವು ಮಾನವೀಯ ಸಂಬಂಧಗಳಿಗೆ ಎಷ್ಟು ಬೆಲೆಕೊಡುತ್ತೇವೆ ಎಂಬುದನ್ನು ನಿರೂಪಿಸಿದ್ದಾರೆ.
ಏನಿದು? ಯಾಕಾಗಿ?
ಒಂಭತ್ತನೇ ತರಗತಿಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿಗಳು ತಾವು ಐಪಿಎಸ್ ಅಧಿಕಾರಿಗಳಾಗಬೇಕು ಎಂಬ ಕನಸು ಹೋತ್ತಿದ್ದರು. ಅದರೆ ಗಂಭೀರ ಅನಾರೋಗ್ಯ ಸಮಸ್ಯೆ ಹಿನ್ನಲೆಯಲ್ಲಿ ಬಳಲುತ್ತಿರುವ ಇವರ ಕನಸು ನನಸಾಗಿಸಲು ಪೊಲೀಸ್ ಇಲಾಖೆ ಖುದ್ದು ಆಸಕ್ತಿ ವಹಿಸಿ ಮುಂದೆ ಬಂದಿದೆ. ಅವರನ್ನು ಕರೆಯಿಸಿ ಕೆಲ ಕಾಲ ಐಪಿಎಸ್ ಅಧಿಕಾರಿಗಳಾಗಿ ಮಾಡುವ ಮೂಲಕ ಆ ಮಕ್ಕಳ ಕನಸು ನನಸಾಗಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ, ಐಪಿಎಸ್ ಅಧಿಕಾರಿ ಸಿ.ಕೆ.ಬಾಬಾ, ಪೊಲೀಸ್ ಸಮವಸ್ತ್ರದಲ್ಲಿರುವ ಮಕ್ಕಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ‘ಈ ಮಕ್ಕಳು ಕಠಿಣ ರೋಗದ ವಿರುದ್ಧ ಹೋರಾಡುತ್ತಿದ್ದಾರೆ ಅವರ ಆಸೆಯನ್ನು ನನಸಾಗಿಸುವಲ್ಲಿ ನಾವು ಸಣ್ಣ ಪಾತ್ರವನ್ನು ವಹಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಮಕ್ಕಳ ಆಸೆಯನ್ನು ನೆರವೇರಿಸುವುದಕ್ಕಾಗಿ ಕೆಲವು ಗಂಟೆಗಳ ಕಾಲ ಐಪಿಎಸ್ ಅಧಿಕಾರಿಗಳಾಗಿ ಮಾಡಲಾಗಿದೆ. ಅವರಿಗೆ ಸಂತೋಷ ಸಿಕ್ಕಿದೆ, ನಮಗೆ ಸಂತೃಪ್ತಿ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.