ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸ್ ಕ್ಯೂಬ್, ಐಸ್ ಕ್ರೀಂ, ಚಾಕಲೇಟ್ ಕರಗೋದನ್ನು ನೋಡಿರುತ್ತೀರಿ. ಆದರೆ ರಸ್ತೆಗಳು ಕೂಡ ಐಸ್ನಂತೆ ಕರಗೋದನ್ನು ನೀವು ಎಂದಾದರೂ ನೋಡಿದ್ದೀರಾ? ಹೌದು ಆಶ್ಚರ್ಯ ಎನಿಸಿದರೂ ಇದು ಸತ್ಯ. ಯುಕೆಯ ಹಲವು ಭಾಗಗಳಲ್ಲಿ ರಸ್ತೆಯ ಡಾಂಬರು ಕರಗಿ ನೀರಾಗಿ ಕಾಲಿಗೆ ಅಂಟಿಕೊಳ್ಳುತ್ತಿದೆ ಎಂದು ಅಲ್ಲಿನ ಜನರು ದೂರಿದ್ದಾರೆ.
ಜಾಗತಿಕ ತಾಪಮಾನವು ಭವಿಷ್ಯದಲ್ಲಿ ಮಾನವನ ಜೀವನಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಇಂದಿನ ಯುಕೆನಲ್ಲಿರುವ ಪರಿಸ್ಥಿತಿ ತೋರಿಸುತ್ತದೆ. ಮೂರು ದಿನಗಳ ಹಿಂದೆ ಗ್ರೇಟರ್ ಮ್ಯಾಂಚೆಸ್ಟರ್ನಲ್ಲಿ 34.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇಷ್ಟೊಂದು ತಾಪಮಾನ ದಾಖಲಾಗಿರುವುದು ಇದೇ ಮೊದಲು. ಜುಲೈ 2019 ರಲ್ಲಿ, ಈ ಪ್ರದೇಶವು 33.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ರಸ್ತೆ ಮೇಲಿನ ತಾಪಮಾನ 50 ಡಿಗ್ರಿ ತಲುಪುತ್ತಿದ್ದು, ರಸ್ತೆಯನ್ನು ಕರಗಿಸುತ್ತಿದೆ. ಇದರಿಂದ ಆ ರಸ್ತೆಗಳಲ್ಲಿ ವಾಹನಗಳು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಏತನ್ಮಧ್ಯೆ, ಬ್ರಿಟನ್ನ ಇತರ ಹಲವು ಭಾಗಗಳಲ್ಲಿ ದಾಖಲೆಯ ತಾಪಮಾನ ದಾಖಲಾಗುತ್ತಿದೆ. ಇತ್ತೀಚೆಗೆ ದಕ್ಷಿಣ ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣದ ಬಳಿಯಿರುವ ಚಾರ್ಲ್ವುಡ್ ಸರ್ರೆಯಲ್ಲಿ ದಾಖಲೆಯ 39.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.