ನೌಕಾಸೇನೆಗೆ ಬಲತುಂಬಲಿವೆ ಈ ದೇಶೀ ನಿರ್ಮಿತ ಸಮರ ನೌಕೆಗಳು

ಹೊಸದಿಗಂತ ಟಿಜಿಟಲ್‌ ಡೆಸ್ಕ್:‌
ಭಾರತದ್ಲಲೇ ನಿರ್ಮಾಣಗೊಂಡಿರುವ ಎರಡು ಸಮರ ನೌಕೆಗಳನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉದ್ಘಾಟನೆ ಮಾಡಿದ್ದಾರೆ. ʼಪ್ರಾಜೆಕ್ಟ್‌ 15 ಬಿʼ ಅಡಿಯಲ್ಲಿ ನಿರ್ಮಾಣಗೊಂಡಿರುವ ಶತ್ರು ವಿಧ್ವಂಸಕ ʼಐಎನ್‌ಎಸ್‌ ಸೂರತ್‌ʼ ಹಾಗೂ ʼಪ್ರಾಜೆಕ್ಟ್‌ 17 ಎʼ ಅಡಿಯಲ್ಲಿ ನಿರ್ಮಾಣವಾಗಿರುವ ಯುದ್ಧನೌಕೆ ‘ಐಎನ್‌ಎಸ್‌ ಉದಯಗಿರಿʼ ಎಂಬ ಹೆಸರಿನ ಎರಡು ಸಮರ ನೌಕೆಗಳು ಉದ್ಘಾಟನೆಗೊಂಡಿವೆ.

ʼಐಎನ್‌ಎಸ್‌ ಸೂರತ್‌ʼ

ಪ್ರಾಜೆಕ್ಟ್‌ 15 ಬಿ ಅಡಿಯಲ್ಲಿ ಮುಂಬೈನ ಮಜಗಾಂವ್ ಡಾಕ್ಸ್ ಲಿಮಿಟೆಡ್‌ನಲ್ಲಿ ರಹಸ್ಯ ವಿಧ್ವಂಸಕ (ಸ್ಟೆಲ್ತ್‌ ಡೆಸ್ಟ್ರಾಯರ್)‌ ಗಳನ್ನು ನಿರ್ಮಿಸಲಾಗುತ್ತಿದ್ದು ಐಎನ್‌ಎಸ್‌ ಸೂರತ್‌ ಈ ಪ್ರಾಜೆಕ್ಟ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕನೇ ವಿಧ್ವಂಸಕ ಹಡಗಾಗಿದೆ. ಮುಂದಿನ ಪೀಳಿಗೆಯ ತಂತ್ರಜ್ಞಾನ ಮತ್ತು ಅತ್ಯಾಧಿನಿಕ ಶಸ್ತ್ರಾಸ್ತ್ರ ಸೌಲಭ್ಯ ಹೊಂದಿರುವ ಈ ವಿಧ್ವಂಸಕ ಹಡಗಿಗೆ 16 ರಿಂದ 18 ನೇ ಶತಮಾನದಲ್ಲಿ ಹಡಗು ನಿರ್ಮಾಣಕ್ಕೆ ಹೆಸರುವಾಸಿಯಾಗಿದ್ದ ʼಸೂರತ್‌ʼ ನಗರದ ಹೆಸರನ್ನು ಇಡಲಾಗಿದೆ. ಇಲ್ಲಿ ನಿರ್ಮಾಣವಾದ ಹಡಗುಗಳು ತಮ್ಮ ದೀರ್ಘಾಯುಷ್ಯಕ್ಕೆ ಹೆಸರು ವಾಸಿಯಾಗಿದ್ದು 100ಕ್ಕಿಂತ ಹೆಚ್ಚು ವರ್ಷ ಬಾಳಿಕೆ ಬರುತ್ತವೆ ಎನ್ನಲಾಗಿದೆ.
ಎರಡು ವಿಭಿನ್ನ ಸ್ಥಳಗಳಲ್ಲಿ ನಿರ್ಮಾಣಗೊಂಡಿರುವ ಹಡಗನ್ನು ಹಲ್‌ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗಿದ್ದು ಮುಂಬೈನಲ್ಲಿ ಜೋಡಿಸಲಾಗಿದೆ.

ʼಐಎನ್‌ಎಸ್‌ ಉದಯಗಿರಿʼ

ಪ್ರಾಜೆಕ್ಟ್‌ 17ಎ ಅಡಿಯಲ್ಲಿ ನಿರ್ಮಾಣವಾಗಿರುವ ಮೂರನೇ ಯುದ್ಧನೌಕೆ ಇದಾಗಿದ್ದು ಸುಧಾರಿತ ಸ್ಟೆಲ್ತ್ ವೈಶಿಷ್ಟ್ಯಗಳು, ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳು ಮತ್ತು ಪ್ಲಾಟ್‌ಫಾರ್ಮ್ ನಿರ್ವಹಣಾ ವ್ಯವಸ್ಥೆಗಳನ್ನು ಹೊಂದಿದೆ. ಆಂಧ್ರಪ್ರದೇಶದ ಪರ್ವತೆ ಶ್ರೇಣಿಯ ಹೆಸರನ್ನು ಈ ಯುದ್ಧನೌಕೆಗೆ ಇಡಲಾಗಿದೆ.
ಇದು ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಜಲಾಂತರ್ಗಾಮಿ ನಿರೋಧಕ ಹಡಗಾದ ʼಉದಯಗಿರಿʼ ಯ ಮರು ನಿರ್ಮಾಣವಾಗಿದ್ದು. ಹಿಂದಿನ ʼಉದಯಗಿರಿʼಯು 18 ಫೆಬ್ರವರಿ 1976 ರಿಂದ 24 ಆಗಸ್ಟ್ 2007 ರವರೆಗೆ ಮೂರು ದಶಕಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದೆ.

P17A ಕಾರ್ಯಕ್ರಮದ ಅಡಿಯಲ್ಲಿ, ಮುಂಬೈನಲ್ಲಿ4 ಹಾಗೂ ಕೋಲ್ಕತ್ತಾದಲ್ಲಿ3 ಸೇರಿದಂತೆ ಒಟ್ಟು 7 ಯುದ್ಧನೌಕೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಯಲ್ಲಿ ಇಂಟಿಗ್ರೇಟೆಡ್ ಕನ್‌ಸ್ಟ್ರಕ್ಷನ್, ಮೆಗಾ ಬ್ಲಾಕ್ ಔಟ್‌ಸೋರ್ಸಿಂಗ್, ಪ್ರಾಜೆಕ್ಟ್ ಡೇಟಾ ಮ್ಯಾನೇಜ್‌ಮೆಂಟ್/ ಪ್ರಾಜೆಕ್ಟ್ ಲೈಫ್‌ಸೈಕಲ್ ಮ್ಯಾನೇಜ್‌ಮೆಂಟ್ (PDM/PLM) ಮುಂತಾದ ವಿವಿಧ ನವೀನ ಪರಿಕಲ್ಪನೆಗಳು ಮತ್ತು ತಂತ್ರಜ್ಞಾನಗಳನ್ನು ಮೊದಲ ಬಾರಿಗೆ ಸ್ವದೇಶಿ ಯುದ್ಧನೌಕೆ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಆತ್ಮನಿರ್ಭರ ಭಾರತ ಪರಿಕಲ್ಪನೆಯ ಅಡಿಯಲ್ಲಿ 15B ಮತ್ತು P17A ಎರಡೂ ಹಡಗುಗಳನ್ನು ದೇಶದ ಎಲ್ಲ ಯುದ್ದನೌಕೆಗಳ ವಿನ್ಯಾಸ ಕೇಂದ್ರವಾದ ಡೈರೆಕ್ಟರೇಟ್ ಆಫ್ ನೇವಲ್ ಡಿಸೈನ್ (DND) ಮೂಲಕ ವಿನ್ಯಾಸಗೊಳಿಸಲಾಗಿದೆ, ರಕ್ಷಣಾ ಕೈಗಾರಿಕೆಯಲ್ಲಿ ಸ್ವದೇಶಿ ವಸ್ತುಗಳನ್ನು ಪ್ರಸ್ತುತ ಹೆಚ್ಚು ಬಳಸಿಕೊಳ್ಳಲಾಗುತ್ತಿದ್ದು 75% ಉಪಕರಣಗಳು ಮತ್ತು ವ್ಯವಸ್ಥೆಗಳನ್ನು ಸ್ಥಳೀಯ ಕಂಪೆನಿಗಳಿಂದ ತರಿಸಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!