September 10, 2026
Thursday, September 10, 2026
spot_img

‘ಅರಮನೆಯಲ್ಲಿದ್ದು ಜನರನ್ನು ಬೀದಿಗೆ ನಿಲ್ಲಿಸಿದ್ದಾರೆ’: ಡಿಕೆಶಿ ಸರ್ಕಾರದ ವಿರುದ್ಧ ಶ್ರೀರಾಮುಲು ವಾಗ್ದಾಳಿ

ಹೊಸದಿಗಂತ ವರದಿ ಬಳ್ಳಾರಿ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅರಮನೆಯಲ್ಲಿದ್ದು, ಜನರನ್ನು ಬೀದಿಗೆ ನಿಲ್ಲಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಸಕ್ತ ವರ್ಷ ಮಳೆ ಕೊರತೆಯಿಂದ ತೀವ್ರ ಬರಗಾಲ ಎದುರಾಗಿದ್ದರೂ ಮುಖ್ಯಮಂತ್ರಿ ಜನರಿಗೆ ಸಹಾಯ ಮಾಡಿಲ್ಲ. ರೈತರ ಕಷ್ಟಗಳನ್ನು ಆಲಿಸಿಲ್ಲ. ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರ ಮನೆ ಕಾಯುತ್ತ ಕಾಲ ಕಳೆದಿದ್ದಾರೆ. ಇದು ಹೈಟೆಕ್ ಸರ್ಕಾರ, ಬಡವರಿಗೆ ಸಹಾಯ ಮಾಡದ ಬಿಸಿನೆಸ್‌ಮನ್ ಸರ್ಕಾರ ಎಂದು ಟೀಕಿಸಿದರು.

ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಗುರುವಾರ ಸಂಜೆ ನಡೆದ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಹಾಗೂ ಶಾಸಕ ಬಿ.ನಾಗೇಂದ್ರ ಅವರು ನನಗೆ ಶತ್ರುವಲ್ಲ, ಅವರ ಮೇಲೆ ಯಾವುದೇ ದ್ವೇಷವಿಲ್ಲ ಎಂದರು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ 187 ಕೋಟಿ ನಿಗಮದ ಹಣದ ಹಗರಣದ ವಿರುದ್ಧ ನಮ್ಮ ಹೋರಾಟವಾಗಿದೆ. ತನಿಖೆ ವೇಳೆ ನಾಗೇಂದ್ರ ಅವರ ಹೆಸರನ್ನು ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ. ಈ ಹಣ ನಿಗಮಕ್ಕೆ ವಾಪಸಾಗಿ ಸಮುದಾಯದ ಜನರಿಗೆ ತಲುಪಬೇಕು. ಇದನ್ನು ಪ್ರಶ್ನಿಸುವುದು ತಪ್ಪೇ ಎಂದು ಕೇಳಿದರು.

ಇದನ್ನೂ ಓದಿ:

ಡಿ.ಕೆ.ಶಿವಕುಮಾರ್ ಅವರು ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕವನ್ನು ಮರೆತಿದ್ದಾರೆ ಎಂದು ಆರೋಪಿಸಿದ ಶ್ರೀರಾಮುಲು, ಅಧಿಕಾರಕ್ಕೆ ಬಂದು 100 ದಿನ ಕಳೆದರೂ ರಾಜ್ಯದ ಬಡಜನರ ಕಷ್ಟಗಳಿಗೆ ಸ್ಪಂದಿಸಿಲ್ಲ ಎಂದರು. ಅರಮನೆಯಿಂದ ಹೊರಗೆ ಬಂದು ಬಡವರ ಕಷ್ಟ ಅರ್ಥಮಾಡಿಕೊಳ್ಳಬೇಕು. ಹೆಲಿಕಾಪ್ಟರ್ ಮೂಲಕ ಬರ ವೀಕ್ಷಣೆ ಮಾಡಿದರೆ ರೈತರ ಬೆಳೆಗಳು ಕಾಣುವುದಿಲ್ಲ. ರೈತರ ಜಮೀನಿಗೆ ತೆರಳಿ ಹಾಳಾದ ಬೆಳೆಗಳನ್ನು ವೀಕ್ಷಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ ಕಳೆದ ವರ್ಷ ಎರಡು ಬೆಳೆಗಳಿಗೂ ನೀರು ಹರಿಯಲಿಲ್ಲ. ಈ ವರ್ಷ ಮಳೆ ಕೊರತೆಯಾಗಿದೆ. ಜಲಾಶಯದಲ್ಲಿ ನೀರು ಸಂಗ್ರಹವಿದ್ದರೂ ರೈತರ ಜಮೀನುಗಳಿಗೆ ಕಾಲುವೆ ಮೂಲಕ ನೀರು ಹರಿಯುತ್ತಿಲ್ಲ. ಮೊದಲು ರೈತರ ಜಮೀನುಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಕಳೆದ 10 ದಿನಗಳಿಂದ ಲಿಂಗಸೂರುದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದೇವೆ. ಜನರಿಂದ ಅಭೂತಪೂರ್ವ ಬೆಂಬಲ ದೊರೆತಿದ್ದು, ಇದು ನಮ್ಮ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿದೆ. ಕಾರ್ಯಕರ್ತರ ಜೊತೆಗೆ ಮಾಧ್ಯಮದವರು ಸೈನಿಕರಂತೆ ಕೆಲಸ ಮಾಡಿದ್ದು, ಕಾರ್ಯಕ್ರಮದ ಯಶಸ್ಸಿಗೆ ಅವರೂ ಕಾರಣರಾಗಿದ್ದಾರೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !