ಹೊಸದಿಗಂತ ವರದಿ ಚಿತ್ರದುರ್ಗ:
ಹಳೆ ಬಂಗಾರ ನೀಡಿ ಹೊಸ ಬಂಗಾರವನ್ನು ಖರೀದಿಸಲು ಬಂದಿದ್ದ ಮಹಿಳೆಯೊಬ್ಬರಿಂದ ಸುಮಾರು 1 ಲಕ್ಷದ 25 ಸಾವಿರ ರೂ.ಬೆಲೆ ಬಾಳುವ ಒಡವೆಳಿದ್ದ ಬ್ಯಾಗ್ ಅನ್ನು ಕಳ್ಳರು ಕದ್ದೊಯ್ದಿರುವ ಘಟನೆ ಪಟ್ಟಣದ ಮುಖ್ಯವೃತ್ತದಲ್ಲಿರುವ ಸಂಧ್ಯಾ ದೀಪ ಬಂಗಾರದ ಅಂಗಡಿಯಲ್ಲಿ ನಡೆದಿದ್ದು, ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಪಟ್ಟಣದ ಸುಮಿತ್ರ ಎಂಬುವರು ಬಂಗಾರದ ಒಡವೆಗಳನ್ನು ಕಳೆದುಕೊಂಡ ಮಹಿಳೆಯಾಗಿದ್ದಾರೆ.
ಮಹಿಳೆಯು ಬಂಗಾರದ ಒಡವೆಗಳಿದ್ದ ಬ್ಯಾಗ್ ಅನ್ನು ಬಂಗಾರದ ಅಂಗಡಿಯ ಟೇಬಲ್ ಮೇಲೆ ಇಟ್ಟು ಹೊಸ ಬಗೆಯ ಒಡುವೆಗಳನ್ನು ನೋಡುತ್ತಿದ್ದರು. ಈ ವೇಳೆ ಗ್ರಾಹಕರ ಸೋಗಿನಲ್ಲಿ ಮಹಿಳೆಯೊಬ್ಬಳು ಒಬ್ಬ ಬಾಲಕನನ್ನು ಕರೆದುಕೊಂಡು ಅಂಗಡಿಗೆ ಬಂದಿದ್ದಾಳೆ. ಆ ಬಾಲಕನ ಮೂಲಕ ಬಂಗಾರದ ಒಡವೆಗಳಿದ್ದ ಬ್ಯಾಗ್ ಅನ್ನು ಕಳ್ಳತನ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ತಕ್ಷಣ ಬ್ಯಾಗ್ ಇಲ್ಲದಿದ್ದಾಗ ಅಂಗಡಿ ಮಾಲೀಕರನ್ನು ವಿಚಾರಿಸಿದ್ದಾರೆ. ಎಲ್ಲಿಯೂ ಸಿಗದಿದ್ದಾಗ ಹೊಳಲ್ಕೆರೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ 12 ಗ್ರಾಂ ತೂಕದ ಬಂಗಾರದ ಚೈನ್, 4 ಗ್ರಾಂ ತೂಕದ ಉಂಗುರ, 5 ಗ್ರಾಂ ತೂಕದ ಜುಮುಕಿ, 3 ಗ್ರಾಂ ತೂಕದ ಕಿವಿ ಸುತ್ತು, 30 ಗ್ರಾಂ ತೂಕದ ಬೆಳ್ಳಿಯ ಕಾಲು ಚೈನ್ ಸೇರಿ ಒಟ್ಟು 1,25,೦೦೦ ರೂ. ಬೆಲೆ ಬಾಳುವ ಒಡುವೆಗಳು ಕಳವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಮಹಿಳೆಯನ್ನು ಬಂಧಿಸುವಲ್ಲಿ ಹೊಳಲ್ಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.