Sunday, December 3, 2023

Latest Posts

ಸಾಲ ವಸೂಲಾತಿ ವೇಳೆ ರೈತರ ಮೇಲೆ ದೌರ್ಜನ್ಯ: ಶಿವಮೊಗ್ಗದಲ್ಲಿ ಪ್ರತಿಭಟನೆ

ಹೊಸದಿಗಂತ ವರದಿ ಶಿವಮೊಗ್ಗ:

ಸಾಲ ವಸೂಲಾತಿಗಾಗಿ‌ ಬ್ಯಾಂಕ್ ನವರು ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಇಲ್ಲಿನ ಕೆನರಾ ಬ್ಯಾಂಕ್ ವೃತ್ತ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ತಾಲೂಕಿನ ಹೊಳೆಹಟ್ಟಿ ಗ್ರಾಮದ ಕುಪೇಂದ್ರಪ್ಪ ಹೊಳಲೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಬೆಳೆ ಸಾಲ 79,000 ರೂ, ಅಭಿವೃದ್ಧಿ ಸಾಲ 63,000 ರೂ, ಮನೆ ರಿಪೇರಿ ಸಾಲ 3 ಲಕ್ಷ, ಟ್ರಾಕ್ಟರ್ ಸಾಲ 5.10 ಲಕ್ಷ ರೂ ಸೇರಿ 9,52,000 ರೂ. ಸಾಲ ಪಡೆದಿದ್ದಾರೆ. ಈಗಾಗಲೇ 4.50 ಲಕ್ಷ ರೂ. ಪಾವತಿ ಮಾಡಿದ್ದಾರೆ ಎಂದು ತಿಳಿಸಿದರು.

ಉಳಿದ 5.02 ಲಕ್ಷ ರೂ.ಗಳನ್ನು ಪಾವತಿ ಮಾಡಲು ಸಿದ್ಧ ಇದ್ದಾರೆ. ಸಾಲಗಾರ ಕುಪೇಂದ್ರಪ್ಪ ಅನಾರೋಗ್ಯ ಪೀಡಿತ ಆಗಿದ್ದಾರೆ. ಅವರ ಪತ್ನಿ ರಾಜೇಶ್ವರಿ ಮೆದುಳಿನಲ್ಲಿ ರಕ್ತಸ್ರಾವ ಆಗಿ ಜ್ಞಾನ ಕಳೆದುಕೊಂಡಿದ್ದಾರೆ. ವಯೋವೃದ್ಧ ಅಜ್ಜಿ ಶಾಂತಮ್ಮ ಹಾಸಿಗೆ ಹಿಡಿದಿದ್ದಾರೆ. ಮೂರು ಜನರ ಚಿಕಿತ್ಸೆಗೆ ಜಮೀನು ಮಾರಾಟ ಮಾಡಿದ್ದಾರೆ ಎಂದು ವಿವರಿಸಿದರು.

ಈಗ ಬ್ಯಾಂಕ್ ನವರು ಮನೆ ಸ್ವಾಧೀನ ಪಡೆಯಲು ನೋಟೀಸ್ ಅಂಟಿಸಿದ್ದಾರೆ. ಕುಟುಂಬಕ್ಕೆ ಈಗ ಆತ್ಮಹತ್ಯೆ ಒಂದೇ ಉಳಿದಿರುವ ದಾರಿ. ಸಾಲ ಮರು ಪಾವತಿಸಲು ಬ್ಯಾಂಕ್ ಗೆ ಹೋದಾಗ ಒಂದು ಕೋಟೆ ರೂ. ಆಗಿದೆ ಎಂದು ಹೇಳಿದ್ದಾರೆ. ಇದು ಮೀಟರ್ ಬಡ್ಡಿ ಹಾಕುವ ಬ್ಯಾಂಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಕ್ರಬಡ್ಡಿ ಹಾಕಿ ಈ ರೀತಿ ಮಾಡಿದರೆ ರೈತರ ಪಾಡೇನು? ರಾಜ್ಯದಲ್ಲಿ ಬರ ಘೋಷಣೆ ಆಗಿ ಸಾಲ ವಸೂಲಿ ಮಾಡಬಾರದು ಎಂದು ಹೇಳಿದರೂ ಅಮಾನವೀಯವಾಗಿ ಸಾಲ ವಸೂಲಿಗೆ ಮುಂದಾಗಿದ್ದಾರೆ. ಹೀಗಾದರೆ ಬ್ಯಾಂಕ್ ನಲ್ಲೇ ಸಾಲಗಾರರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಕೂಡಲೇ ಬಾಕಿ ಹಣ ಕಟ್ಟಿಸಿಕೊಂಡು ಮುಕ್ತ ಮಾಡಬೇಕು ಎಂದು ಒಥತಾಯಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ,‌ ಜಿಲ್ಲಾಧ್ಯಕ್ಷ ಶಿವಮೂರ್ತಿ, ಈರಣ್ಣ ಅರಬಿಳಚಿ, ಹಿಟ್ಟೂರು ರಾಜು ಇನ್ನಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!