ಹೊಸದಿಗಂತ ಮಡಿಕೇರಿ:
ದಿನದ ವ್ಯವಹಾರ ಮುಗಿಸಿ ಸ್ಕೂಟರ್’ನಲ್ಲಿ ಮನೆಗೆ ತೆರಳುತ್ತಿದ್ದ ಉದ್ಯಮಿಯನ್ನು ತಡೆದು 6 ಲಕ್ಷಕ್ಕೂ ಅಧಿಕ ನಗದು, ಮೊಬೈಲ್ ಫೋನ್, ಕ್ರೆಡಿಟ್ ಕಾರ್ಡ್’ನ್ನು ದರೋಡೆ ನಡೆಸಿರುವ ಘಟನೆ ಸೋಮವಾರ ರಾತ್ರಿ ಸೋಮವಾರಪೇಟೆಯಲ್ಲಿ ನಡೆದಿದೆ.
ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದ ಬಳಿ ‘ಅನುಷಾ ಮಾರ್ಕೇಟಿಂಗ್ ಎಂಬ ಹೋಲ್’ಸೇಲ್ ಮೊಬೈಲ್ ಕರೆನ್ಸಿ, ಮನಿ ಟ್ರಾನ್ಸ್’ಫರಿಂಗ್ ವ್ಯವಹಾರ ನಡೆಸುತ್ತಿರುವ ಕೆ.ಎಂ.ನೇಮಿರಾಜ್ ಎಂಬವರೇ ದರೋಡೆಗೆ ಒಳಗಾದವರು.
ಸೋಮವಾರ ರಾತ್ರಿ ವ್ಯಾಪಾರ ಮುಗಿಸಿ, ಮಾರುಕಟ್ಟೆಯಿಂದ ತರಕಾರಿ ಖರೀದಿಸಿ ಅಂಗಡಿಯಲ್ಲಿದ್ದ 6.18 ಲಕ್ಷ ರೂ.ನಗದು ಹಣ, ಮೂರು ಮೊಬೈಲ್ ಫೋನ್, ಕ್ರೆಡಿಟ್ ಕಾರ್ಡ್’ನ್ನು ಒಂದು ಬ್ಯಾಗ್’ನಲ್ಲಿ, ಹಾಕಿ ತನ್ನ ಸ್ಕೂಟರಿನ ಮುಂಭಾಗ ತರಕಾರಿ ಚೀಲದ ಮೇಲೆ ಅದನ್ನು ಇಟ್ಟುಕೊಂಡು ಪತ್ನಿ ಆಶಾರೊಂದಿಗೆ ಮನೆಗೆ ತೆರಳುತ್ತಿದ್ದರೆನ್ನಲಾಗಿದೆ.
ರಾತ್ರಿ 8.45 ಗಂಟೆಗೆ ಕಿಬ್ಬೆಟ್ಟ ರಸ್ತೆಯ ಸಾಕ್ಷಿ ಕನ್ವೆನ್ಷನ್ ಹಾಲ್’ನಿಂದ ಸ್ವಲ್ಪ ಮುಂದೆ ರಸ್ತೆಯ ತಿರುವಿನಲ್ಲಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ರಸ್ತೆಯ ಬಲಬದಿಗೆ ತಂದು ನೇಮಿರಾಜ್ ಅವರ ಸ್ಕೂಟರಿಗೆ ಡಿಕ್ಕಿಪಡಿಸುವಂತೆ ತಂದು ನಿಲ್ಲಿಸಿದ್ದು, ನೇಮಿರಾಜ್ ಅವರು ಗಾಬರಿಯಿಂದ ಸ್ಕೂಟರನ್ನು ನಿಲ್ಲಿಸಿದಾಗ ಕಾರಿನ ಹಿಂಬದಿ ಬೈಕ್’ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಇವರ ಎಡಬದಿಗೆ ಬಂದು ಬೈಕ್ ನಿಲ್ಲಿಸಿದರೆ, ಅದರಲ್ಲಿದ್ದ ಹಿಂಬದಿ ಸವಾರ ಖಾರದ ಪುಡಿಯನ್ನು ನೇಮಿರಾಜ್ ಅವರ ಮುಖಕ್ಕೆ ಎರಚಿದರೆಂದು ಹೇಳಲಾಗಿದೆ.
ಹೆಲ್ಮೆಟ್ ಧರಿಸಿದ್ದರಿಂದ ಅದು ಸ್ವಲ್ಪ ಮಾತ್ರ ಇವರ ಮುಖಕ್ಕೆ ತಗುಲಿದ್ದು, ಅಷ್ಟರಲ್ಲಿ ಕಾರಿನಿಂದ ಇಳಿದ ಮೂರು ಜನ ಸ್ಕೂಟರ್’ನಲ್ಲಿದ್ದ ನೇಮಿರಾಜ್ ಅವರ ಪತ್ನಿ ಆಶಾರನ್ನು ಕೆಳಗೆ ತಳ್ಳಿ, ಬೀಳಿಸಿ ಮಂದೆ ಇಟ್ಟಿದ್ದ ಬ್ಯಾಗ್’ಗಳನ್ನು ಕೆಳಗೆ ಎಳೆದು ಹಾಕಿ, ಬ್ಯಾಗ್’ನಲ್ಲಿದ್ದ ಸ್ಟೀಲ್ ಫ್ಲಾಸ್ಕ್’ನಿಂದ ಆಶಾ ಆವರ ತಲೆಗೆ ಹೊಡೆದಿದ್ದಾರೆ. ಅವರು ಕಿರುಚಿಕೊಂಡಾಗ ನೇಮಿರಾಜ್ ಅತ್ತ ತೆರಳುವಷ್ಟರಲ್ಲಿ ಹಣವಿದ್ದ ಬ್ಯಾಗನ್ನು ಆಗಂತುಕರು ತೆಗೆದುಕೊಂಡು ವಾಹನದೊಂದಿಗೆ ಪರಾರಿಯಾಗಿರುವುದಾಗಿ ಹೇಳಲಾಗಿದೆ.
ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.