ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದವರ ವಿರುದ್ಧ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದ ಜಾಗೃತ ದಳದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು 6 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಿದ್ದಾರೆ.
ಸೆಸ್ಕ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸೆಸ್ಕ್ ಜಾಗೃತ ದಳದ ಪೊಲೀಸ್ ಅಧೀಕ್ಷಕರಾದ ಸವಿತಾ ಹೂಗಾರ ಅವರ ನೇತೃತ್ವದಲ್ಲಿ ಜಾಗೃತ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸೆಸ್ಕ್ ವಿಭಾಗ ವ್ಯಾಪ್ತಿಗೆ ಒಳಪಡುವ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಐದು ಜಿಲ್ಲೆಗಳಲ್ಲಿ ಅಕ್ರಮವಾಗಿ ವಿದ್ಯುತ್ ಕಳ್ಳತನ, ವಿದ್ಯುತ್ ದುರುಪಯೋಗ ಮಾಡಿದವರ ವಿರುದ್ಧ ಕ್ರಮ ಕೈಗೊಂಡು, ಪ್ರಕರಣಗಳನ್ನು ದಾಖಲಿಸಲಾಗಿದೆ.
ಸೆಸ್ಕ್ ಜಾಗೃತ ದಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ಗೃಹ, ವಾಣಿಜ್ಯ, ಕೈಗಾರಿಕೆ, ತಾತ್ಕಾಲಿಕ ಸ್ಥಾವರಗಳು ಮತ್ತು ಇತರ ಕಡೆಗಳಲ್ಲಿ 5,716 ಸ್ಥಾವರಗಳನ್ನು ಜಾಗೃತ ದಳದ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ 1,312 ವಿದ್ಯುತ್ ಕಳ್ಳತನ ಮತ್ತು ದುರುಪಯೋಗ ಪ್ರಕರಣಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಗಳಿಂದ ಒಟ್ಟು 6 ಕೋಟಿ 36 ಲಕ್ಷದ 72 ಸಾವಿರ ರೂ. ದಂಡ ವಿಧಿಸಲಾಗಿದೆ.
ಮೀಟರ್ ಪರಿಶೀಲನೆ ವಿಭಾಗದಿಂದ ವಿವಿಧ ವಿಭಾಗಗಳಲ್ಲಿ ಒಟ್ಟು 23,014 ಸ್ಥಾವರಗಳ ರೇಟಿಂಗ್ ಮಾಡಿ, ಲೋಪಗಳಿರುವ ಕಡೆಗಳಲ್ಲಿ ಗುರುತಿಸಲಾಗದ ಪ್ರಕರಣಗಳನ್ನು ದಾಖಲಿಸಿ 12,37,56,660 ರೂ. ದಂಡವನ್ನು ವಿಧಿಸಲಾಗಿದೆ.