ಕೆಂಪೇಗೌಡರ ಪ್ರತಿಮೆ ಕೆತ್ತಿದ ಸುತಾರ್ ಕುಟುಂಬದ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರಗತಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ.

ಈ ಪ್ರಗತಿ ಪ್ರತಿಮೆಯನ್ನು ನಿರ್ಮಿಸಿದ್ದು ಸುತಾರ್ ಕುಟುಂಬ. ಪದ್ಮ ಭೂಷಣ ರಾಮ್ ಸುತಾರ್ ಪ್ರತಿಮೆ ನಿರ್ಮಾಣ ಮಾಡಿ ಭಾರತದ ಅತ್ಯಂತ ಶ್ರೇಷ್ಠ ಶಿಲ್ಪಿ ಎನಿಸಿಕೊಂಡಿದ್ದಾರೆ. ಸುತಾರ್ ಕುಟುಂಬದ ಮೂರು ತಲೆಮಾರಿನ ಪರಿಶ್ರಮದಿಂದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗಿದೆ.

ಒಂದೇ ಕುಟುಂಬದ ಮೂರು ತಲೆಮಾರಿನ ಶಿಲ್ಪಿಗಳು ಹಾಗೂ ಇತರೆ 200 ಶಿಲ್ಪಿಗಳು ಸತತ ಒಂಬತ್ತು ತಿಂಗಳ ಕಾಲ ಇದರ ಕೆತ್ತನೆಯಲ್ಲಿ ತೊಡಗಿದ್ದಾರೆ. ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾದ ರಾಮ್ ವಿ. ಸುತಾರ್ ಅವರು ಪ್ರತಿಮೆ ಹೇಗೆ ಕಾಣುತ್ತದೆ ಹಾಗೂ ಇದರ ಪರಿಕಲ್ಪಯನ್ನು ಅಂತಿಮಗೊಳಿಸಿದ್ದಾರೆ. ಇನ್ನು ಅವರ ಸತತ ಮೇಲ್ವಿಚಾರಣೆಯಲ್ಲಿ ಪ್ರತಿಮೆಯ ಕೆತ್ತನೆ ಹಾಗೂ ನಿರ್ಮಾಣದ ಕೆಲಸದ ಜವಾಬ್ದಾರಿಯನ್ನು ಅವರ ಪುತ್ರ ಅನಿಲ್ ಸುತಾರ್ ಹೊತ್ತುಕೊಂಡಿದ್ದಾರೆ.

ಪ್ರತಿಮೆ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸರ್ಕಾರದೊಂದಿದೆ ಸಹಯೋಗ ನಡೆಸಿಕೊಂಡು ಜತೆಗೆ ಅಂತಿಮ ಪ್ರತಿಷ್ಠಾಪನೆಯನ್ನು ನೋಡಿಕೊಂಡಿದ್ದು ಮೊಮ್ಮಗ ಸಮೀರ್ ಸುತಾರ್. ಹೀಗೆ ಕುಟುಂಬದ ಮೂರು ತಲೆಮಾರುಗಳು ಪ್ರತಿಮೆ ನಿರ್ಮಾಣದಲ್ಲಿ ಭಾಗಿಯಾದಂತಿದೆ.

ಗುಜರಾತಿನಲ್ಲಿರುವ ಏಕತೆಯ ಪ್ರತಿಮೆ ನಿರ್ಮಾಣದಲ್ಲಿಯೂ ಸುತಾರ್ ಕುಟುಂಬ ಕಾರ್ಯನಿರ್ವಹಿಸಿದೆ. ವಿಕಾಸ ಸೌಧ ಹಾಗೂ ವಿಧಾನ ಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು ಇದೇ ಸುತಾರ್ ಕುಟುಂಬ.

ಕೆಂಪೇಗೌಡರ ಪ್ರತಿಮೆ ಅನಾವರಣದ ಹಿಂದೆ ಸತತ ಒಂಬತ್ತು ತಿಂಗಳ ಪರಿಶ್ರಮ ಇದೆ. ಮೊದಲು ಸುತಾರ್ ಅವರು ಕೆಂಪೇಗೌಡರ ಬಗ್ಗೆ ವಿಸ್ತಾರವಾದ ಸಂಶೋಧನೆ ನಡೆಸಿ ಸಮರ್ಪಕವಾದ ರೇಖಾಚಿತ್ರ ತಯಾರಿಸಿದ್ದಾರೆ. ನಂತರ ನೋಯ್ಡಾದಲ್ಲಿರುವ ಸ್ಟುಡಿಯೋದಲ್ಲಿ ಮೊದಲು ಮೂರು ಅಡಿಗಳ ಮಾದರಿ ರಚಿಸಲಾಗಿದೆ. ನಂತರ ಮತ್ತೆ 10 ಅಡಿಗಳ ಮಾದರಿಯನ್ನು ರಚಿಸಿ ನಂತರ ಅದಕ್ಕೆ ಬೇಕಾದ ಕಂಚು ಹಾಗೂ ಉಕ್ಕಿನ ಭಾಗಗಳ ಮೌಲ್ಡಿಂಗ್‌ಗಳನ್ನು ನಿರ್ಮಿಸಲಾಗಿದೆ, ನಂತರ ಇವುಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ತಂದು ಜೋಡಿಸಲಾಗಿದೆ.

ಸುತಾರ್ ಕುಟುಂಬದ ಇಷ್ಟು ಅತ್ಯತ್ತಮವಾಗಿ ಕಾರ್ಯ ನಿರ್ವಹಿಸಲು ಅವರ ಸಂಶೋಧನೆಯೂ ಮುಖ್ಯವಾಗಿದೆ. ಬೆಂಗಳೂರು ದೊರೆಯ ಉಡುಗೆ ತೊಡುಗೆಗಳು ಹೇಗಿತ್ತು, ಅವರ ಶಸ್ತ್ರಾಸ್ತ್ರಗಳು ಹೇಗಿದ್ದವು? ಅವರ ಛಾಪು, ವ್ಯಕ್ತಿತ್ವ, ಗತ್ತು, ಗಾಂಭೀರ್ಯ ಎಲ್ಲವನ್ನು ಅರಿಯುವುದು ಮೊದಲ ಹಂತ, ತದನಂತರ ಮಾತ್ರ ಇಂಥ ಪ್ರತಿಮೆ ಮೂಡಿ ಬರಲು ಸಾಧ್ಯ.

ನಮಗೆ ಕೆಂಪೇಗೌಡರ ಬಗ್ಗೆ ಸಾಕಷ್ಟು ಹೆಮ್ಮೆಯಿದೆ, ಈ ಪ್ರತಿಮೆಯನ್ನು ನೋಡಿದಾಗ ಸಂತಸವಾಗುತ್ತದೆ. ಈ ಮುಂಚೆ ಕೆಂಪೇಗೌಡರ ಬಗ್ಗೆ ನಮಗೆ ತಿಳಿದೇ ಇರಲಿಲ್ಲ. ಪ್ರತಿಮೆ ತಯಾರಿಗಾಗಿ ಸಂಶೋಧನೆ ನಡೆಸುತ್ತಾ ಹೋದಂತೆ ಅವರ ಬಗ್ಗೆ ತಿಳಿಯಿತು. ಅದ್ಭುತ ವ್ಯಕ್ತಿತ್ವದ ಪರಿಚಯವಾಗಿದೆ ಎಂದು ಸುತಾರ್ ಕುಟುಂಬ ಹೇಳಿದೆ. ಪ್ರತಿಮೆ ನಿರ್ಮಾಣಕ್ಕಾಗಿ ಪ್ರಧಾನಿ ಮೋದಿ ಸುತಾರ್ ಕುಟುಂಬವನ್ನು ಅಭಿನಂದಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!