ಹೊಸದಿಗಂತ ವರದಿ, ಚಿತ್ರದುರ್ಗ:
ರಾಜ್ಯದ ವಿವಿಧೆಡೆಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ೧೫ ಸಾವಿರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಚಿಂತನೆ ನಡೆದಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಸ್ತುತ ೩೦೦೦ ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿಗೆ ತಯಾರಿ ನಡೆಸುತ್ತಿದ್ದೇವೆ. ಎಷ್ಟು ಜನರಿಗೆ ತರಬೇತಿ ನೀಡಲು ಅವಕಾಶ ಇದೆ ಎಂಬುದನ್ನು ನೋಡಿಕೊಂಡು ಮತ್ತೆ ಮುಂದಿನ ಹಂತದಲ್ಲಿ ೩೦೦೦ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಹೀಗೆ ಹಂತ ಹಂತವಗಿ ಖಾಲಿ ಹುದ್ದೆಗಳ ಭರ್ತಿಹೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿಎಸ್‌ಐ ಹಗರಣದಿಂದ ಗೊಂದಲ ಉಂಟಾಗಿದ್ದು, ಮರು ಪರೀಕ್ಷೆಗೆ ಈಗಾಗಲೇ ಸಿದ್ಧತೆ ನಡೆದಿದೆ. ನ್ಯಾಯಾಲಯದ ಆದೇಶದಂತೆ ಮರು ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ೪೦೦ ಪಿಎಸ್‌ಐ ಹುದ್ದೆಗಳ ಭರ್ತಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ೬೦೦ ಸೇರಿದಂತೆ ಒಟ್ಟು ೧೦೦೦ ಪಿಎಸ್‌ಐ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅಲ್ಲದೇ ಡಿಸಿಆರ್‌ಇ ಸೆಲ್‌ಗಳಿಗೆ ನಾವು ದೂರು ಸ್ವೀಕರಿಸಲು ಅಧಿಕಾರ ನೀಡಿದ್ದೇವೆ ಎಂದು ತಿಳಿಸಿದರು.
ಮುರುಘಾ ಶ್ರೀ ಕೇಸ್ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯದ ಆದೇಶ ಏನು ಬಂದಿದೆ, ಅದನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ. ನ್ಯಾಯಾಲಯದಲ್ಲಿ ವಿಷಯ ಇರುವುದರಿಂದ ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಪಟಾಲಂ ನನ್ನನ್ನು ಕಳ್ಳನಾಗಿ ಮಾಡುತ್ತಿದ್ದಾರೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಆರೋಪ ಕುರಿತು ಮಾತನಾಡಿದ ಗೃಹ ಸಚಿವರು, ಹೆಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಯೋಚನೆ ಮಾಡಿ ಮಾತನಾಡಬೇಕು. ಟೀಕೆ ಟಿಪ್ಪಣಿ ಮಾಡಲಿ ನಾವು ಬೇಡ ಎಂದು ಹೇಳಲ್ಲ.
ಸರ್ಕಾರಕ್ಕೆ ಸಲಹೆ ನೀಡಲಿ, ಸುಖಾ ಸುಮ್ಮನೆ ಅವರು ಆಡುವ ಮಾತುಗಳಿಗೆ ನಮ್ಮ ಪ್ರತಿಕ್ರಿಯೆ ಇರಲ್ಲ ಎಂದರು.
ಗ್ಯಾರಂಟಿ ಯೋಜನೆ ಕುರಿತು ಬಿ.ವೈ.ವಿಜಯೇಂದ್ರ ಅವರ ಹೇಳಿಕೆ ವಿಚಾರ ಕುರಿತು ಮಾತನಾಡಿ, ಸಾವಿರಾರು ಕೋಟಿ ಜನರಿಗೆ ನಾವು ನೀಡಿದ್ದೇವೆ. ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗಳನ್ನು ನೇರವಾಗಿ ಜನರಿಗೆ ನೀಡಿದ್ದೇವೆ. ನಮಗೆ ಯಾವ ರಾಜಕೀಯ ನಾಯಕರ ಸರ್ಟಿಫಿಕೇಟ್ ಬೇಕಾಗಿಲ್ಲ. ಜನರು ನಮಗೆ ಸರ್ಟಿಫಿಕೇಟ್ ನೀಡಿದ್ದಾರೆ. ಮುಂದೆಯೂ ನೀಡುತ್ತಾರೆ ಎಂದು ಹೇಳಿದರು.
ತೆಲಂಗಾಣದಲ್ಲಿ ಜಮೀರ್ ಅಹಮದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಜಮೀರ್ ಏನೂ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಅದನ್ನು ತಿಳಿದುಕೊಂಡು ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದು ಸುಮ್ಮನಾದರು.