ಮೇಘನಾ ಶೆಟ್ಟಿ, ಶಿವಮೊಗ್ಗ
ಉತ್ತರ ಕನ್ನಡದ ಶಿರೂರು ದುರಂತದ ಜೊತೆ ಜೊತೆಯಲ್ಲಿ ಭಾರೀಯಾಗಿ ಕೇಳಿಬಂದ ಹೆಸರು ಈಶ್ವರ್ ಮಲ್ಪೆ.
ಮನಕಲಕುವ ದುರಂತದ ಸುದ್ದಿಗಳ ನಡುವೆಯೂ ಕೊನೆಯ ಕ್ಷಣದ ವರೆಗೂ ಎಲ್ಲರಲ್ಲಿ ಆಶಾಭಾವ ಮೂಡಿಸಿದ ವ್ಯಕ್ತಿ ಇವರು.
ದೂರದಿಂದ ಸೆಲೆಬ್ರಿಟಿ ಲುಕ್‌ನಲ್ಲಿ ಕಾಣಿಸುವ ಈ ಮುಳುಗುತಜ್ಞಗೆ ಕೈತುಂಬಾ ದುಡ್ಡು, ಸಮಾಜದಲ್ಲಿ ಹೆಸರು, ಪ್ರಸಿದ್ಧಿ, ಸೆಲ್ಫಿ ತೆಗೆದುಕೊಳ್ಳೋಕೆ ಸುತ್ತಮುತ್ತ ಮುಗಿಬೀಳುವ ಜನ ಇದ್ದಾರೆ ಅಂತೆಲ್ಲಾ ನೀವು ಭಾವಿಸಿದ್ದರೆ ಅದು ಅಪ್ಪಟ ಸುಳ್ಳು. ಈ ವ್ಯಕ್ತಿಯ ಜೀವನ ನಾವು, ನೀವು ಅಂದುಕೊಂಡದ್ದಕ್ಕಿಂತ ಸಿಂಪಲ್. ಹೃದಯವಂತಿಕೆಯಲ್ಲಿ ಮಾತ್ರ ಇವರು ಅಪ್ಪಟ ಕುಬೇರ.
ಉಡುಪಿ ಜಿಲ್ಲೆಯ ಈಶ್ವರ್ ಮಲ್ಪೆ, ಅನುಭವಿ ಮುಳುಗು ತಜ್ಞ. ಇದುವರೆಗೂ ನೀರಿಗೆ ಬಿದ್ದ ನೂರಾರು ಜೀವಗಳನ್ನು ಉಳಿಸಿದ್ದಾರೆ. ಹಾಗೆಯೇ ನೀರಿಗೆ ಬಿದ್ದು ಪ್ರಾಣಹೋದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇವರಿಗೆ ಇದ್ಯಾವುದು ಕೆಲಸ ಅಲ್ಲ, ಇದು ಸೇವೆ. ಈಶ್ವರ್, ತನ್ನನ್ನು ತಾನು ಸೈನಿಕ ಎಂದು ನಂಬಿದ್ದಾರೆ. ಹಾಗೆಯೇ ಇದು ತಮ್ಮ ಪಾಲಿನ ದೇಶ ಸೇವೆ ಎಂದು ನಂಬಿದ್ದಾರೆ.
ಇಂದು ನಮ್ಮಲ್ಲಿ ದುಬಾರಿ ಮೊಬೈಲ್ ಫೋನ್, ಹೊಳೆಯುವ ಚಿನ್ನದ ಒಡವೆ, ಐಶಾರಾಮಿ ವಾಹನ… ಇವೆಲ್ಲ ಇರಬಹುದು ಇವುಗಳಿಂದ ಹೆಚ್ಚು ಬೆಲೆಬಾಳುವ ? ಮನುಷ್ಯರು? ನೀರಿಗೆ ಬಿದ್ದಾಗ ಒಂದು ಕ್ಷಣವೂ ಆಲೋಚಿಸದೇ ನೀರಿಗೆ ಧುಮುಕುವ ಧೈರ್ಯ, ಆತ್ಮಸ್ಥೈರ್ಯ ಹಾಗೂ ಸೇವಾ ಮನೋಭಾವ ಇರುವ ವ್ಯಕ್ತಿ ಈಶ್ವರ ಮಲ್ಪೆ..
ಇಂತಹಾ ಮುಳುಗು ತಜ್ಞಗೆ ಪ್ರತೀ ಬಾರಿ ನೀರಿಗೆ ಬಿದ್ದು ಶವವಾಗಲಿದ್ದ ಜೀವಗಳನ್ನು ಉಳಿಸಿದಾಗ ಅವರ ಪೋಷಕರು, ಮನೆಮಂದಿಯಿಂದ ಹಾರೈಕೆಗಳು, ಆಶೀರ್ವಾದಗಳು ಸಿಗುತ್ತವೆ. ಆದರೆ ವಿಧಿ ಒಂದಿಷ್ಟು ಕ್ರೂರಿ, ಆಶೀರ್ವಾದಗಳು ಮಾತ್ರ ಈಶ್ವರ್ ಜೀವನಕ್ಕೆ ತಾಗಿದಂತಿಲ್ಲ.
ಈಶ್ವರ್ ಮನೆಯಲ್ಲಿದ್ದಾರೆ ಇಬ್ಬಿಬ್ಬರು ದಿವ್ಯಾಂಗ ʼಚೇತನʼರು..
ಈಶ್ವರ್ ಹೊರಗಿನ ಜಗತ್ತಿನಲ್ಲಿ ನಗುತ್ತಾ, ಜನರ ಸೇವೆ ಮಾಡುತ್ತಾ ತೃಪ್ತಿ ಕಾಣುತ್ತಾರೆ. ಆದರೆ ಬದುಕಿನ ಪರಿಸ್ಥಿತಿ ಭಿನ್ನವಿದೆ. ಮನೆಯಲ್ಲಿ ಖುಷಿಯ ಛಾಯೆ ಇಲ್ಲ. ಈಶ್ವರ್‌ಗೆ ಮೂವರು ಮಕ್ಕಳು, ಮೂವರಲ್ಲಿ ಒಬ್ಬ ಮಗ ಮೂರು ವರ್ಷದ ಹಿಂದೆ ಮೃತಪಟ್ಟಿದ್ದಾನೆ. ಇನ್ನು ೨೪ ವರ್ಷದ ಮಗನಿದ್ದಾನೆ ಆದರೆ ಆತ ದಿವ್ಯಾಂಗ, ಮಲಗಿಕೊಂಡು ಸೀಲಿಂಗ್ ನೋಡುವುದನ್ನು ಬಿಟ್ಟರೆ ಆತ ಇನ್ನೇನೂ ಮಾಡುವ ಶಕ್ತಿ ಹೊಂದಿಲ್ಲ. ಇನ್ನು ಏಳು ವರ್ಷದ ಮಗಳಿದ್ದು, ಆಕೆಯೂ ದಿವ್ಯಾಂಗಳಾಗಿದ್ದಾಳೆ. ಆಕೆ ತನ್ನ ಅಣ್ಣನಂತೆ ಮಲಗಿದಲ್ಲೇ ಮಲಗಿಲ್ಲ, ಕನಿಷ್ಟ ಎದ್ದು ಓಡಾಡುತ್ತಾಳೆ ಅನ್ನೋದೇ ಈಶ್ವರ್‌ಗೆ ಖುಷಿ ವಿಷಯ.
ಮನೆಯಲ್ಲಿ ಲೆಕ್ಕವಿಲ್ಲದಷ್ಟು ಪ್ರೀತಿಯ ಆಸ್ತಿಯಿದೆ..
ಮೊದಲ ಮಗನನ್ನು ಕಳೆದುಕೊಂಡ ಕೆಲ ದಿನಗಳಲ್ಲಿ ತನ್ನ ತಂದೆಯನ್ನು ಈಶ್ವರ್ ಕಳೆದುಕೊಂಡಿದ್ದಾರೆ. ಅದಾದ ಕೆಲವೇ ದಿನಗಳಲ್ಲಿ ತಾಯಿಯೂ ಇಹಲೋಕ ತ್ಯಜಿಸಿದ್ದಾರೆ. ಕಷ್ಟ ಕೋಟಲೆ ಸಹಿಸುತ್ತಾ ಈಶ್ವರ್ ಹಾಗೂ ಅವರ ಪತ್ನಿಯ ಕಣ್ಣೀರು ಈಗ ಬತ್ತಿಹೋಗಿದೆ. ಈಶ್ವರ್ ಕೋಟಿ ಕೋಟಿ ಒಡೆಯ ಎಂಬೆಲ್ಲಾ ಮಾತುಗಳು ವೈರಲ್ ಆಗಿದ್ದವು. ಆದರೆ ಒಮ್ಮೆ ಮಾಹಿತಿಯೇ ಕೊಡದೆ ಅವರ ಮನೆಗೆ ದಿಢೀರ್ ಭೇಟಿ ನೀಡಿ, ನಿಮಗೆ ಕಾಣಸಿಗೋದು ಲಕ್ಷುರಿ ಬಂಗಲೆಯಲ್ಲ. ನಾವು ನೀವು ವಾಸಿಸುವ ಮಾಮೂಲಿ ಮನೆ. ಇಲ್ಲಿರೋದು ಕೋಟಿ ಹಣವಲ್ಲ, ಕೋಟಿ ಜನರ ಪ್ರೀತಿಯಿಂದ ಸಂಪಾದಿಸಿದ ಪ್ರಶಸ್ತಿಗಳು, ಸನ್ಮಾನ ಪತ್ರಗಳು!
ನೀರಲ್ಲಿ ಇಳಿದ ಮೇಲೆ ವಾಪಾಸ್ ಬರ್ತೀನಾ?
ಇಷ್ಟಕ್ಕೂ ನೀರಿನಲ್ಲಿ ಕೊಚ್ಚಿಹೋಗುವವರ ಪ್ರಾಣ ಉಳಿಸಲು, ನೀರಲ್ಲಿ ಬಿದ್ದ ಮೃತದೇಹ ಹೊರತೆಗೆಯಲು ಧುಮುಕುವ ಈಶ್ವರ್, ಮತ್ತೆ ವಾಪಾಸ್ ಬರುತ್ತಾರೋ ಇಲ್ಲವೋ ಎನ್ನುವುದು ಅವರಿಗೂ ಗೊತ್ತಿರುವುದಿಲ್ಲ. ನೀರಿನಾಳದಲ್ಲಿ ಬರೀ ಕಪ್ಪು ಮಣ್ಣು, ಹೂಳು ಕಾಣಿಸುತ್ತದೆ. ಕೆಲವೊಮ್ಮೆ ಬೃಹತ್ ಗಾತ್ರದ ಮೊಸಳೆಗಳು ಇರುತ್ತವೆ. ಅವರು ದೇಹಕ್ಕೆ ಕಟ್ಟಿಕೊಂಡು ಇಳಿದ ಹಗ್ಗದ ಮೇಲೆ ಜೀವ ಆಧಾರಿತವಾಗಿರುತ್ತದೆ. ಸಾವಿರಾರು ಜನರ ಹಾರೈಕೆಗಳೇ ಅವರಿಗೆ ಈ ಸಂದರ್ಭದಲ್ಲಿ ಶ್ರೀರಕ್ಷೆ.
ದೇವರು ಕೊಟ್ಟ ಪತ್ನಿಯಿವಳು..
ಈಶ್ವರ್ ಸಮಾಜಸೇವೆಗೆ ಅವರ ಪತ್ನಿ ಕೂಡ ಪ್ರಮುಖ ಕಾರಣ. ಆವರೇ ಬೆನ್ನೆಲುಬು. ಮನೆಯಲ್ಲಿ ಎರಡು ವಿಕಲಚೇತನ ಮಕ್ಕಳು, ಹೆಚ್ಚು ಹಣವಿಲ್ಲ. ಎಲ್ಲಕ್ಕಿಂತ ದೊಡ್ಡದಾಗಿ ನಾನು ವಾಪಾಸ್ ಬರುತ್ತೇನೋ ಇಲ್ಲವೋ ಕಾಯಬೇಡ ಎಂದು ಹೇಳಿ ಹೋಗುವ ಗಂಡನಿಗೆ ಸಾಥ್ ನೀಡೋಕೆ ಯಾವ ಪತ್ನಿ ಒಪ್ಪಿಯಾಳು? ಆದರೆ ನನ್ನ ಗಂಡ ಮಾಡುವ ಪುಣ್ಯದ ಕೆಲಸ ಅವರನ್ನು ರಕ್ಷಿಸುತ್ತದೆ. ಇನ್ನಷ್ಟು ಜೀವಗಳನ್ನು ಬದುಕಿಸಲು ದೇವರು ಅವರಿಗೆ ಆಯಸ್ಸು ನೀಡುತ್ತಾನೆ ಎಂದು ನಂಬಿದ್ದಾರೆ ಅವರ ಪತ್ನಿ. ಅಂತೆಯೇ ಇಂತಹ ಪತ್ನಿ ಇರುವ ಕಾರಣದಿಂದಲೇ ನಾನು ಜನಸೇವೆ ಮಾಡಲು ಸಾಧ್ಯವಾಗುತ್ತಿದೆ. ಈಕೆ ನನ್ನ ಪತ್ನಿ ಅಷ್ಟೇ ಅಲ್ಲ, ದೇವರು ನೀಡಿದ ಕಾಣಿಕೆ ಎನ್ನುತ್ತಾರೆ ಈಶ್ವರ್.
ನಿಮ್ಮ ಅಕೌಂಟಿಗೂ ಪುಣ್ಯ ಜಮೆಯಾಗಲಿ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತಿದೆ. ಮೇಲ್ನೋಟಕ್ಕೆ ಕಂಡದ್ದೆಲ್ಲವೂ ಸರಾಗವಾಗಿ ಇರೋದಿಲ್ಲ, ನಗುತ್ತಾ ಇರುವ ವ್ಯಕ್ತಿಯ ಜೀವನದಲ್ಲಿಯೂ ಕಷ್ಟ ಕಟ್ಟಲೆಗಳಿರುತ್ತವೆ. ತಮ್ಮ ಬಳಿ ಇರುವ ಎರಡು ನೀರಿನ ಟ್ಯಾಂಕರ್‌ನಿಂದ ಬರುವ ಹಣದಲ್ಲಿ ಈಶ್ವರ್ ಮಲ್ಪೆ ಅವರ ಕುಟುಂಬ ಸಾಗುತ್ತದೆ. ಜೊತೆಗೆ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದ್ದಾರೆ. ಆಂಬುಲೆನ್ಸ್ ಸಿಕ್ಕಿಲ್ಲ ಎಂದು ಯಾವ ಜೀವವೂ ಕೊನೆಯಾಗಬಾರದು ಎಂಬ ಉದ್ದೇಶ ಅವರದ್ದು. ಇಷ್ಟಕ್ಕೂ ನಾವು ನೀಡುವ ಹಣದಿಂದ ಅವರು ಚಿನ್ನ ಕೊಳ್ಳೋದಿಲ್ಲ, ಮನೆ ಕಟ್ಟೋದಿಲ್ಲ. ಅವೆಲ್ಲವನ್ನು ಬರೀ ಪೆಟ್ರೋಲ್, ಡೀಸೆಲ್‌ಗಾಗಿ ಮೀಸಲಿಡ್ತಾರೆ!
ಅವರ ಸಮಾಜ ಸೇವೆಗೆ ನೀವೂ ಸಾಥ್ ನೀಡಬೇಕೇ? ಆರ್ಥಿಕ ನೆರವು ಸಾಧ್ಯವಾಗದಿದ್ದರೆ ಒಂದೆರಡು ಮೆಚ್ಚುಗೆಯ ಮಾತು ಹೇಳಬೇಕೇ? ಇಲ್ಲಿದೆ ಅವರ ಸಂಪರ್ಕ ಸಂಖ್ಯೆ: 9663434415. ಒಮ್ಮೆ ಕರೆಮಾಡಿ ಶಹಬಾಸ್ ಹೇಳಿ, ಒಂದಿಷ್ಟು ಪುಣ್ಯ ನಿಮ್ಮ ಅಕೌಂಟ್‌ನಲ್ಲಿಯೂ ಜಮೆಯಾಗಲಿ.