ಹೊಸದಿಗಂತ ಡಿಜಿಟಲ್ ಡೆಸ್ಕ್;
ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಈ ಹೋರಾಟ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ಮೈಸೂರು ನಗರದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ರಹಿತ ಅಧಿಕಾರ ಕೊಡುತ್ತೀವಿ, ಅಹಿಂದ ಸಮುದಾಯಗಳಿಗೆ ಸೌಕರ್ಯ ಒದಗಿಸುತ್ತೇವೆ ಎಂದು ಹೇಳಿದ್ದರು. ಕಳೆದ ಹದಿನೈದು ತಿಂಗಳ ಭ್ರಷ್ಟಾಚಾರವನ್ನು ವಿರೋಧಿಸಿ ನಾವು ಪಾದಯಾತ್ರೆ ಮಾಡಿದ್ದೇವೆ. ಈ ಹೋರಾಟ ನಿಮ್ಮ ವಿರುದ್ಧ ಅಲ್ಲ, ಭ್ರಷ್ಟಾಚಾರದ ವಿರುದ್ಧ ಎಂದು ಹೇಳಿದರು.
ರಾಜ್ಯದಲ್ಲಿ ಅಧಿಕಾರ ಹಿಡಿಯಲು ಹೋರಾಟ ಅಲ್ಲ, ರಾಜ್ಯದಲ್ಲಿ ಭೀಕರ ಬರ ಇದ್ದಾಗ ಇವರು ರೈತನ ಪರ ಕೆಲಸ ಮಾಡಲಿಲ್ಲ. ಬಡವರು ಮನೆ ಕಳೆದುಕೊಂಡರೆ ಐದು ಲಕ್ಷ ರೂಪಾಯಿ ಕೊಡುತ್ತಿದ್ದರು, ನೀವು ಅದನ್ನು ಒಂದು ಲಕ್ಷಕ್ಕೆ ಇಳಿಸಿದ್ದೀರಿ. ಅದನ್ನೂ ನೀವು ಕೊಡಲಿಲ್ಲ. ರಾಜ್ಯದಲ್ಲಿ ದಾರಿದ್ರ್ಯ ಸರ್ಕಾರ ಇದೆ. ಯಾವುದೇ ವಿಧಾನ ಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆ ಘೋಷಣೆ ಮಾಡಲಿಲ್ಲ. ನೀವು ಮುಖ್ಯಮಂತ್ರಿ ಆದ ಮೇಲೆ ಭೀಕರ ಬರಗಾಲ ಹಾಗೂ 1500 ರೈತರು ಆತ್ಮಹತ್ಯೆ ಮಾಡಿಕೊಂಡರು. ರಾಜ್ಯದಲ್ಲಿ ಸರ್ಕಾರ ಬದುಕಿದ್ದು ಸತ್ತಂತೆ ಎಂದು ಕಿಡಿಕಾರಿದರು.
ನಿಮ್ಮ ವಿರುದ್ಧ ಮಾತನಾಡಿದರೆ ಬೆದರಿಕೆ ಹಾಕುತ್ತೀರಿ, ನಿಮ್ಮ ಸರ್ಕಾರದಿಂದ ರೈತರು, ಕಾರ್ಮಿಕರು ನರಳುತ್ತಿದ್ದಾರೆ. ಹೀಗಾಗಿ ನಿಮ್ಮನ್ನು ತೊಳಗಿಸಬೇಕಿದೆ. ಮೈಸೂರಿಗೆ ಪಾದಯಾತ್ರೆ ಮೂಲಕ ಬಂದ್ರೆ ತಡೆಯುತ್ತೀರಿ, ವಿಧಾನ ಸಭೆ ಹಾಗೂ ಪರಿಷತ್‌ನಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಜುಲೈ 14ರಂದು ಒನ್ ಮ್ಯಾನ್ ಕಮಿಷನ್ ನೇಮಕ ಮಾಡುತ್ತಾರೆ. ರಾಜ್ಯದ ಸಿಎಂ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರ ಕೊಡಲಿಲ್ಲ. ನಮ್ಮ ಸವಾಲು ಸ್ವೀಕರಿಸಲು ಸಾಧ್ಯವಾಗದೇ ರಣಹೇಡಿ ರೀತಿಯಲ್ಲಿ ಓಡಿ ಹೋಗಿದ್ದಾರೆ ಎಂದು ಕಿಡಿಕಾರಿದರು.
ಮುಡಾದಲ್ಲಿ ಹಗರಣ ಆಗಿಲ್ಲವೆಂದರೆ ಯಾಕೆ ಓಡಿ ಹೋದ್ರಿ, ಉಪಮುಖ್ಯಮಂತ್ರಿಗಳು ಬಿಚ್ಚಿಡ್ತೀವಿ ಅಂತ ಬೆದರಿಕೆ ಹಾಕುತ್ತಾರೆ. ತಾಕತ್ತಿದ್ದರೆ ವಾಲ್ಮೀಕಿ ಹಗರಣದಲ್ಲಿ ಮುಚ್ಚಿಟ್ಟಿರುವ ದಾಖಲೆ ಬಿಚ್ಚಿಡಿ ಬನ್ನಿ ಎಂದು ಆಗ್ರಹಿಸಿದರು.
ಯಡಿಯೂರಪ್ಪ ರಾಜಕೀಯ ನಿವೃತ್ತಿ ಆಗಬೇಕು ಅಂತೀರಾ? ಯಡಿಯೂರಪ್ಪ ಕಂಡರೆ ನಿಮಗೆ ಯಾಕೆ ಭಯ? 2014 ರಲ್ಲಿ 15 ಎಫ್ಐಆರ್ ದಾಖಲು ಮಾಡಿಸಿದ್ದೀರಿ, ರಾಜಕೀಯವಾಗಿ ಯಡಿಯೂರಪ್ಪ ಹೆದರಿಸಲು ಆಗದೇ ಕೇಸ್ ಹಾಕಿದ್ದೀರಿ. ಯಡಿಯೂರಪ್ಪ ಮೇಲೆ ಹಲ್ಲೆ ಆಗಿ ಬದುಕುಳಿದಾಗ ನನ್ನ ಕೊನೆಯ ಉಸಿರುವವರೆಗೂ ಜನರ ಪರ ಕೆಲಸ ಮಾಡುತ್ತೀನಿ ಎಂದು ನಮ್ಮ ತಾಯಿಗೆ ಹೇಳಿದ್ದರು. ಯಡಿಯೂರಪ್ಪ ಕೊನೆಯ ಉಸಿರು ಇರೋವರೆಗೂ ರಾಜಕೀಯ ಮಾಡುತ್ತಾರೆ ಎಂದು ಹೇಳಿದರು.