ಹೊಸದಿಗಂತ ವರದಿ ಹುಬ್ಬಳ್ಳಿ:
ಚಾಮರಾಜಪೇಟೆಯಲ್ಲಿ ಆಕಳ ಕೆಚ್ಚಲು ಕತ್ತರಿಸಿದ ಪ್ರಕರಣ ಖಂಡನೀಯ. ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಇಂತಹ ಎಲ್ಲ ಅಪರಾಧಿಗಳಿಗೆ ಸ್ವರ್ಗವಾಗಿರುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಲ್ಪಸಂಖ್ಯಾತರ ತೃಷ್ಟೀಕರಣ ಮಾಡುತ್ತಾರೆ. ಅವರ ಮೇಲಿನ ಪ್ರಕರಣ ಹಿಂಪಡೆದಿರುವ ಪರಿಣಾಮ ಇಂತಹ ಕೃತ್ಯಗಳು ನಡೆಯುತ್ತಿವೆ. ಸಮಾಜದ ದ್ರೋಹಿಗಳಿಗೆ ಬಲ ಬಂದಿದೆ ಎಂದು ಹರಿಹಾಯ್ದರು.
ಸರ್ಕಾರವೇ ಅಪರಾಧಿಗಳ ರಕ್ಷಿಸಬಹುದು ಎಂಬ ಧೈರ್ಯವಿದೆ. ಆದ್ದರಿಂದ ಪದೇ ಪದೇ ಇಂತಹ ಕೃತ್ಯಗಳು ನಡೆಯುತ್ತಿವೆ. ಸರ್ಕಾರ ಗಟ್ಟಿಯಾದರೆ ಈ ರೀತಿ ಪ್ರಕರಣ ನಡೆಯೋದಿಲ್ಲ. ಇದು ಸರ್ಕಾರ ಸಂಪೂರ್ಣ ವೈಫಲ್ಯ. ಈ ಬಗ್ಗೆ ಬಿಜೆಪಿ ಹೋರಾಟ ಮಾಡಿದರೆ ರಾಜಕೀಯ ಪ್ರೇರಿತ ಅನ್ನುತ್ತಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಸಡ್ಡೆಯಿಂದ ಈ ರೀತಿ ಆಗುತ್ತಿದೆ. ಹೀಗಾದರೆ ಜನರು ಹೇಗೆ ಜೀವನ ನಡೆಸಬೇಕು ಎಂದು ಪ್ರಶ್ನಿಸಿದರು.