ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ ಎಂದು ಆಂಧ್ರ ಐಟಿ ಸಚಿವ ನಾರಾ ಲೋಕೇಶ್ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಬೆಂಗಳೂರಿನ ವಿಚಾರವಾಗಿ ಆಂಧ್ರ ಪ್ರದೇಶ ಐಟಿ ಸಚಿವ ನಾರಾ ಲೋಕೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ನಾರಾ ಲೋಕೇಶ್ ಆಗಲಿ, ಬೇರೆಯವರಾಗಲಿ, ಯಾರ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು, 2 ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ.
ದೇಶದ ಪ್ರಗತಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರವಾಗಿದೆ. ಕೇಂದ್ರ ಸರ್ಕಾರಕ್ಕೆ ಸುಮಾರು 40% ತೆರಿಗೆ ಆದಾಯ ಇಲ್ಲಿಂದಲೇ ಹೋಗುತ್ತಿದೆ. ಅವರು ತಮ್ಮ ಬಗ್ಗೆ ಮಾರ್ಕೆಟಿಂಗ್ ಮಾಡಿಕೊಳ್ಳಲು ಮಾತನಾಡುತ್ತಾರೆ. ಅವರು ಏನಾದರೂ ಮಾಡಿಕೊಳ್ಳಲಿ. ಅವರಿಗೆ ಕೇಂದ್ರ ಸರ್ಕಾರವೂ ಸಹಾಯ ಮಾಡಲಿ. ಆದರೆ ಬೆಂಗಳೂರಿಗೆ ಸರಿಸಮನಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಎಷ್ಟು ವಿದೇಶಿ ನಾಯಕರು ನನ್ನನ್ನು ಸಂಪರ್ಕಿಸುತ್ತಿದ್ದಾರೆ ಎಂದು ನಮಗೆ ಗೊತ್ತಿದೆ. ನಾನು ಐಟಿ ಸಚಿವರು, ಬೃಹತ್ ಕೈಗಾರಿಕೆ ಸಚಿವರು ಕೂತು ಚರ್ಚೆ ಮಾಡುತ್ತೇವೆ. ವಿದೇಶಿ ಕಂಪನಿಗಳು ಇಷ್ಟು ದಿನ ಬೆಂಗಳೂರಿನಲ್ಲಿ ಬಾಡಿಗೆ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಅಮೆರಿಕದಲ್ಲಿನ ಬೆಳವಣಿಗೆ ನಂತರ ಈಗ ಅವರು ಸ್ವಂತ ಜಾಗ ಖರೀದಿಗೆ ಮುಂದಾಗುತ್ತಿದ್ದಾರೆ. ತಮ್ಮದೇ ಸ್ವಂತ ಕ್ಯಾಂಪಸ್ ಹೊಂದಲು ಮುಂದಾಗಿದ್ದಾರೆ ಇದು ಬೆಂಗಳೂರಿನ ಶಕ್ತಿ ಎಂದು ತಿಳಿಸಿದರು.