ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಬೆಂಬಲಿಗ ಶಾಸಕರು ನಡೆಸಿದ ಸರಣಿ ಡಿನ್ನರ್ ಸಭೆಗಳ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಚಾಣಾಕ್ಷತನದಿಂದ ಪ್ರತಿಕ್ರಿಯಿಸಿದ್ದಾರೆ. ಇದನ್ನು ‘ಶಕ್ತಿ ಪ್ರದರ್ಶನ’ ಎಂದು ಕರೆಯುವ ಬದಲು, ಶಾಸಕರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ರಾಜಕೀಯ ಆಸೆ ಎಂದು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಇದು ಯಾವುದೇ ಶಕ್ತಿ ಪ್ರದರ್ಶನದ ಭಾಗವಲ್ಲ. ಶಾಸಕರು ಕೆಲವೊಮ್ಮೆ ವಿದೇಶಕ್ಕೆ ಹೋಗುತ್ತಾರೆ, ಕೆಲವೊಮ್ಮೆ ದೆಹಲಿಗೆ ಹೋಗುತ್ತಾರೆ, ಹಾಗೆಯೇ ಊಟಕ್ಕೂ ಸೇರುತ್ತಾರೆ. ಇವೆಲ್ಲವೂ ಅವರ ವೈಯಕ್ತಿಕ ವಿಚಾರಗಳೇ ಹೊರತು ಪಕ್ಷದ ನಿರ್ಧಾರಗಳಲ್ಲ,” ಎಂದು ಸ್ಪಷ್ಟಪಡಿಸಿದರು.
ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಬೇಕು ಎಂಬ ಶಾಸಕರ ಆಗ್ರಹದ ಕುರಿತು ಮಾರ್ಮಿಕವಾಗಿ ಮಾತನಾಡಿದ ಅವರು, “ನಾನು, ಸಿದ್ದರಾಮಯ್ಯ, ಪರಮೇಶ್ವರ್ ಅಥವಾ ಎಚ್.ಕೆ. ಪಾಟೀಲ್ ಅವರಂತಹ ನಾಯಕರು ಚಿಕ್ಕ ವಯಸ್ಸಿನಲ್ಲೇ ಮಂತ್ರಿಗಳಾಗಿ ಅಧಿಕಾರ ನೋಡಿದ್ದೇವೆ. ಈಗಿನ ಹೊಸ ಶಾಸಕರಿಗೂ ಮಂತ್ರಿ ಆಗಬೇಕು, ಅಧಿಕಾರ ಹಿಡಿಯಬೇಕು ಎಂಬ ಆಸೆ ಇರುವುದು ಸಹಜ. ಅವರ ಈ ಆಸೆ ಮತ್ತು ನಡೆಯ ಬಗ್ಗೆ ದೆಹಲಿಯ ಹೈಕಮಾಂಡ್ ನಾಯಕರಿಗೂ ಸ್ಪಷ್ಟವಾದ ಗಮನವಿದೆ,” ಎಂದು ಹೇಳುವ ಮೂಲಕ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದಾರೆ.



