ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಮತ್ತೆ ಎರಡು ಸೇತುವೆಗಳು ಕುಸಿದಿದ್ದು, ಕಳೆದ ಎರಡು ವಾರಗಳಲ್ಲಿಯೇ ಒಟ್ಟು 7 ಸೇತುವೆಗಳು ಕುಸಿದಂತಾಗಿದೆ. ಇದರಿಂದಾಗಿ ಭಾರಿ ಜನಾಕ್ರೋಶ ವ್ಯಕ್ತವಾಗುತ್ತಿದೆ.
ಬಿಹಾರದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಸಿವಾನ್ ಜಿಲ್ಲೆಯಲ್ಲಿ ಬುಧವಾರ ಸುಮಾರು 35 ವರ್ಷಗಳಷ್ಟು ಹಳೆಯದಾದ ಸೇತುವೆಗಳು ಕುಸಿದಿವೆ. ದಿಯೋರಿಯಾ ಬ್ಲಾಕ್ನಲ್ಲಿ ಸೇತುವೆಗಳು ಕುಸಿದಿದ್ದು, ಯಾವುದೇ ಪ್ರಾಣಾಪಾಯ, ಜನರಿಗೆ ಗಾಯಗಳಾಗಿರುವ ಕುರಿತು ವರದಿಯಾಗಿಲ್ಲ. ಮಹಾರಾಜ್ಗಂಜ್ ಸೇರಿ ಹಲವು ಗ್ರಾಮಗಳಿಗೆ ಸೇತುವೆಗಳು ಸಂಪರ್ಕ ಒದಗಿಸುತ್ತಿದ್ದವು. ಈಗ ಸೇತುವೆಗಳು ಕುಸಿದ ಕಾರಣ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.
ಬಿಹಾರದಲ್ಲಿ ಕಳೆದ ಕೆಲ ದಿನಗಳಿಂದ ಸೇತುವೆ ಕುಸಿತದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಜೂನ್ 28ರಂದು ಮಧುಬನಿ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದಿತ್ತು. ಇದಕ್ಕೂ ಒಂದು ದಿನ ಮೊದಲೇ ಅಂದರೆ ಜೂನ್ 27ರಂದು ಕಿಶನ್ಗಂಜ್ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದಿತ್ತು. ಜೂನ್ 23ರಂದು ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಸಣ್ಣ ಸೇತುವೆ ಕುಸಿದು ಅಧಿಕಾರಿಗಳು ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಜೂನ್ 22ರಂದು ಕೂಡ ಸಿವಾನ್ ಜಿಲ್ಲೆಯಲ್ಲಿ ಸೇತುವೆ ಕುಸಿದಿತ್ತು. ಜೂನ್ 19ರಂದೂ ಅರಾತಿಯಾ ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆ ಧರೆಗುರುಳಿತ್ತು.