ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಐತಿಹಾಸಿಕ ಕಂಬಳ ಕ್ರೀಡೆ ನಡೆಯಲಿದ್ದು, ಲಕ್ಷಾಂತರ ಮಂದಿ ಭಾಗಿಯಾಗಲಿದ್ದಾರೆ.
ಬೆಂಗಳೂರು ಕಂಬಳ ನಮ್ಮ ಕಂಬಳ ಹೆಸರಿನಲ್ಲಿ ಇಂದು ಹಾಗೂ ನಾಳೆ ಕಂಬಳ ಕ್ರೀಡೆ ನಡೆಯಲಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾರ್ಯಕ್ರಮದ ಜೋಡು ಕರೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಉದ್ಘಾಟಿಸಲಿದ್ದಾರೆ.
ಇನ್ನು ಸಂಜೆ ಆರು ಗಂಟೆಗೆ ಸಿಎಂ ಸಿದ್ದರಾಮಯ್ಯ ಕಂಬಳವನ್ನು ಉದ್ಘಾಟನೆ ಮಾಡಲಿದ್ದು, ಲಕ್ಷಾಂತರ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
ಅರಮನೆ ಮೈದಾನದ ಗೇಟ್ ನಂಬರ್, ಒಂದು, ಎರಡು, ಮೂರು ಹಾಗೂ ನಾಲ್ಕರಲ್ಲಿ ಸಾರ್ವಜನಿಕರಿಗೆ ಪ್ರವೇಶ ನೀಡಲಾಗುತ್ತಿದೆ. ಇನ್ನು ಕಂಬಳ ವೀಕ್ಷಿಸಲು ವಿಐಪಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ.
ಅರಮನೆ ಮೈದಾನ ಸಮೀಪದಲ್ಲಿ ಶುಕ್ರವಾರವೇ ಪೂಜೆ ಸಲ್ಲಿಸಿ ಪ್ರಾಯೋಗಿಕವಾಗಿ ಕಂಬಳ ಓಟ ನಡೆಸಲಾಗಿದೆ, ತುಳುಕೂಟಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ.
ಕಂಬಳದ ಓಟದಲ್ಲಿ ಗೆದ್ದ ಜೋಡಿಗೆ ಮೊದಲ ಬಹುಮಾನವಾಗಿ 16 ಗ್ರಾಂ ಚಿನ್ನದ ಪದಕ ಹಾಗೂ ಒಂದು ಲಕ್ಷ ರೂಪಾಯಿ ನೀಡಲಾಗುತ್ತದೆ. ಕಂಬಳ ನಡೆಯುವ ಜಾಗದಲ್ಲಿ ಈಗಾಗಲೇ 150ಕ್ಕೂ ಹೆಚ್ಚು ಆಹಾರ ಮಳಿಗೆಗಳ ಕೌಂಟರ್ ತೆರೆಯಲಾಗಿದೆ.
ಇನ್ನು ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಸಮಸ್ಯೆ ಬಾರದಂತೆ ಗೇಟ್ ನಂಬರ್ ಆರರಲ್ಲಿ ಸಾವಿರ ಕಾರುಗಳ ಪಾರ್ಕಿಂಗ್‌ಗೆ ಅವಕಾಶ ಮಾಡಲಾಗಿದೆ.