ಕಾಂಗ್ರೆಸ್ ನ ಪ್ರತಿಯೊಂದು ಸುಳ್ಳಿನ ಹಿಂದಿರುವ ಸತ್ಯಾಂಶವೇ ಈ ಕಿರು ಹೊತ್ತಿಗೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಸುಳ್ಳಿನ ಹಿಂದಿರುವ ಸತ್ಯಾಂಶವನ್ನು ಜನರ ಮುಂದಿಡುವ ಉದ್ದೇಶದಿಂದ ಕಿರು ಹೊತ್ತಿಗೆಯನ್ನು ಹೊರತರುತ್ತಿದ್ದೇವೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

ಬೆಂಗಳೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಕಾಂಗ್ರೆಸ್ ನ ನಿರಂತರ ಸುಳ್ಳುಗಳು ಮತ್ತು ಇದರ ಹಿಂದಿನ ಸತ್ಯಾಂಶಗಳ ಕುರಿತ ‘ಅಸತೋಮ ಸದ್ಗಮಯ’ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಹುಲ್‍ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಲೇ ಬಂದಿದ್ದಾರೆ. ಮುಖ್ಯವಾಗಿ ಈ ಚುನಾವಣೆಯಲ್ಲಿ ಸುಳ್ಳುಗಳನ್ನು ಆಧರಿಸಿ ರಾಜಕೀಯ ಪ್ರಚಾರದಲ್ಲಿ ತೊಡಗಿದ್ದಾರೆ. ಕೆಲ ತಿಂಗಳ ಹಿಂದೆ ಎಚ್.ಎ.ಎಲ್ ಸಂಕಷ್ಟದಲ್ಲಿದೆ. ಉದ್ಯೋಗಿಗಳು ಕೆಲಸ ಕಳೆದು ಕೊಳ್ಳುವ ಭೀತಿಯಲ್ಲಿದೆ ಎಂದು ಪ್ರಚಾರ ಮಾಡಿತ್ತು. ಆದರೆ, ಎಚ್‍ಎಎಲ್ ಇದೀಗ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಗತಿ ದಾಖಲಿಸಿದೆ ಎಂದು ತಿಳಿಸಿದರು.

ಅದಾದ ಬಳಿಕ ನಂದಿನಿ-ಅಮೂಲ್ ವಿಷಯದಲ್ಲಿ ರಾಜಕೀಯ ಲಾಭ ಪಡೆಯಲೆತ್ನಿಸಿತು. ಆದರೆ, ಎರಡೇ ದಿನಗಳಲ್ಲಿ ಈ ವಿಚಾರ ಠುಸ್ ಆಯಿತು. ಮತ್ತೆ ಬ್ಯಾಂಕಿಂಗ್ ವ್ಯವಸ್ಥೆ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ, ಯುಪಿಎ ಸರ್ಕಾರದಲ್ಲಿ ಬ್ಯಾಂಕ್‍ಗಳ ಸಾಲಗಳ ಬಹುತೇಕ ಮೊತ್ತ 9 ಕಂಪೆನಿಗಳಿಗೆ ಹೋಗುತ್ತಿತ್ತು. ಇಷ್ಟೇ ಅಲ್ಲದೇ ಮೀಸಲಾತಿ ಕುರಿತು ಕಾಂಗ್ರೆಸ್ ನಾಯಕರ ಹೇಳಿಕೆಗಳ ಹಿಂದಿರುವ ನಿಜಾಂಶವನ್ನು ಬಿಜೆಪಿ ಸ್ಪಷ್ಟಪಡಿಸಿದೆ ಎಂದು ತಿಳಿಸಿದರು.

ಈ ರೀತಿಯ ಅನೇಕ ಸುಳ್ಳುಗಳನ್ನು ಹೇಳುತ್ತಾ ಬಂದಿರುವ ಕಾಂಗ್ರೆಸ್, ನೀರಾವರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿತ್ತು. ಆದ್ರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣವೇ ಪ್ರತಿಕ್ರಿಯಿಸಿ, ನಿಜಾಂಶವನ್ನು ತಿಳಿಸಿದ್ದಾರೆ. ಸುಳ್ಳು ರಾಜಕೀಯದಲ್ಲಿ ತೊಡಗಿರುವ ಕಾಂಗ್ರೆಸ್, ಎಂದಿಗೂ ಈಡೇರಿಸದ ಆಶ್ವಾಸನೆಗಳನ್ನು ನೀಡುತ್ತಿದೆ. ಸುಳ್ಳುಗಳಿಂದ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಹಿಂದಿನ ವಿಧಾನಸಭಾ ಚುನಾವಣೆಗಳಲ್ಲೂ ಇದೇ ಸುಳ್ಳು ರಾಜಕೀಯ ಮಾಡಿತ್ತು ಎಂದು ಆಕ್ಷೇಪಿಸಿದರು.

ಕೋವಿಡ್ ಮತ್ತು ಇತರ ಸವಾಲುಗಳ ನಡುವೆಯೂ ಕರ್ನಾಟಕ ಮೂಲಸೌಕರ್ಯ, ಆರೋಗ್ಯ ಮುಂತಾದ ವಲಯಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ದೇಶದ ಆರ್ಥಿಕಾಭಿವೃದ್ಧಿಯ ಸಾಧನೆಯನ್ನು ಜನರು ಸ್ವಾಗತಿಸಿದ್ದಾರೆ. ಅಂತಾರಾಷ್ಟ್ರೀಯ ಸಂಸ್ಥೆಗಳೂ ಪ್ರಶಂಸಿಸಿವೆ. ಭ್ರಷ್ಟಾಚಾರ ವಿರುದ್ಧ ಸರ್ಕಾರ ಶೂನ್ಯ ಸಹಿಷ್ಣುತೆ ಹೊಂದಿದೆ. ಸಬ್-ಕ-ಸಾಥ್, ಸಬ್-ಕ-ವಿಶ್ವಾಸ್, ಸಬ್-ಕ-ವಿಕಾಸ್ ಮಂತ್ರದಂತೆ ಎಲ್ಲ ವರ್ಗಗಳನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಧರ್ಮ ಆಧರಿತ ಮೀಸಲಾತಿಯನ್ನು ಬಿಜೆಪಿ ಒಪ್ಪುವುದಿಲ್ಲ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳು ಯಾವುದೇ ತಾರತಮ್ಯವಿಲ್ಲದೆ ಎಲ್ಲ ವರ್ಗಗಳಿಗೂ ತಲುಪುತ್ತಿವೆ. ಈ ಚುನಾವಣೆಯಲ್ಲಿ ಜನಾದೇಶ, ಬಿಜೆಪಿ ಪರವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ. ಸಮೀರ್ ಕಾಗಲ್ಕರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಒಂದು ಸುಳ್ಳನ್ನು ಹತ್ತು ಬಾರಿ ಹೇಳಿ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿನ ಆರ್ಥಿಕತೆಯ ಅಸಮರ್ಪಕ ನಿರ್ವಹಣೆಯೇ ಇದಕ್ಕೆ ಕಾರಣ. 2014ರಲ್ಲಿ ಭಾರತ ಬಲಹೀನ ರಾಷ್ಟ್ರಗಳಲ್ಲಿ ಒಂದೆನಿಸಿತ್ತು. ಆದರೆ ಇದೀಗ ವಿಶ್ವದ ಐದನೇ ಪ್ರಬಲ ಆರ್ಥಿಕ ರಾಷ್ಟ್ರವೆನಿಸಿದೆ. ಐಎಂಎಫ್ ಸಹ ಆರ್ಥಿಕಾಭಿವೃದ್ಧಿಯಲ್ಲಿ ಭಾರತದ ಸಾಧನೆಯನ್ನು ಪ್ರಶಂಸಿಸಿದೆ. ಕೇಂದ್ರ ಸರ್ಕಾರದ ದಿಟ್ಟ ತೀರ್ಮಾನಗಳಿಂದ ಹಣದುಬ್ಬರ ದರವೂ ಭಾರತದಲ್ಲಿ ಕಡಿಮೆ ಇದೆ. ಜಿಎಸ್‍ಟಿ ಸಂಗ್ರಹದಲ್ಲೂ ಭಾರೀ ಏರಿಕೆಯಾಗುತ್ತಿದೆ. ಆದರೆ, ಆರ್ಥಿಕಾಭಿವೃದ್ಧಿಯಲ್ಲಿ ಭಾರತದ ಸಾಧನೆಯನ್ನು ಅಲ್ಲಗೆಳೆಯಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ನಿರಂತರ ಸುಳ್ಳುಗಳನ್ನು ಹೇಳುತ್ತಾ ಬಂದಿದೆ ಎಂದು ಆರೋಪಿಸಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲ್ ಅಗರ್‍ವಾಲ್ ಮಾತನಾಡಿ, ಬ್ಯಾಂಕ್‍ಗಳ ಮೂಲಕ ನೀಡುವ ಕೃಷಿ ಸಾಲಗಳಿಗಿಂತ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವ ಯೋಜನೆಯನ್ನು ಪ್ರಧಾನಿಯವರು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಈ ಮೂಲಕ ಸೋರಿಕೆಗಳನ್ನು ತಡೆಯಾಗಲಿದೆ. ಸರ್ಕಾರ ತೆಗೆದುಕೊಂಡ ಹಲವು ನಿರ್ಧಾರಗಳ ಫಲವಾಗಿ ದೇಶದಲ್ಲಿ ಮಾಸಿಕ ಜಿಎಸ್‍ಟಿ ಸಂಗ್ರಹ 1.50 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!