ಲಾಭದ ಆದಾಯ ತಂದುಕೊಡುತ್ತಿದೆ ಕೃಷಿಯ ಈ ಉಪಕಸುಬು!

– ರಮೇಶ ಮೋಟೆ

ನರಗುಂದ: ಕೃಷಿಯ ಜೊತೆಗೆ ಉಪಕಸುಬಾಗಿರುವ ಮೀನು ಸಾಕಾಣಿಕೆ ಅಧಿಕವಾಗುತ್ತಿರುವುದು ಕಂಡುಬರುತ್ತಿದೆ. ಸಣ್ಣ ಹಾಗೂ ದೊಡ್ಡ ಹಿಡುವಳಿದಾರರೆನ್ನದೇ ಯಾರೂ ಬೇಕಾದರೂ ಮೀನು ಸಾಕಾಣಿಕೆ ವೃತ್ತಿಯಿಂದ ಉತ್ತಮ ಆದಾಯ ಗಳಿಸಬಹುದು. ಇದನ್ನೇ ಸಾಧಿಸಿ ತೋರಿಸಿದ್ದಾರೆ ಪಟ್ಟಣದ ಮಾಜಿ ಪುರಸಭಾ ಸದಸ್ಯ ವಿಠ್ಠಲ ಅಣ್ಣಪ್ಪ ಮುಧೋಳೆ.

ಹೊಲದಲ್ಲಿ 8-10 ಅಡಿಯಷ್ಟು ಆಳ ಇರುವ ಚಿಕ್ಕದಾದ ಕೆರೆ ನಿರ್ಮಿಸಿಕೊಂಡರೆ ಆ ನೀರು ಕೃಷಿ ಗೂ ಬರುತ್ತೆ ಮತ್ತು ಆ ಕೆರೆಯಲ್ಲಿ ಮೀನು ಸಾಕಾಣಿಕೆ ಸಹ ಮಾಡಬಹುದು. ಕೃಷಿಯಲ್ಲಿ ಕೆಲವು ಬಾರಿ ನಷ್ಟವುಂಟಾದಾಗ ಇಂಥಹ ಉಪಕಸುಬುಗಳೇ ರೈತರ ಕೈಹಿಡಿಯುತ್ತವೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.

ವಿಠ್ಠಲ ಮುಧೋಳೆ ಅವರು ತಮ್ಮ ಕೃಷಿ ಕೆಲಸದೊಂದಿಗೆ ಬೇರೆ ಬೇರೆ ರೈತರ ಹೊಲದಲ್ಲಿನ ಸುಮಾರು 8 ಕೆರೆಗಳನ್ನು ಮೀನು ಸಾಕಾಣಿಕೆಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. 1 ಎಕರೆ ವಿಸ್ತಾರವುಳ್ಳ ಕೃಷಿಗಾಗಿ ನಿರ್ಮಿಸಿಕೊಂಡ ರೈತರ ಪ್ರತಿ ಕೆರೆಗಳಲ್ಲಿ 20 ಸಾವಿರದಷ್ಟು ಮೀನು ಸಾಕಾಣಿಕೆ ಮಾಡಲಾಗಿದೆ. ಆದರೆ ಕೊನೆಗೆ 5 ಸಾವಿರ ಮರಿಗಳು ಬದುಕುಳಿಯುತ್ತವೆ. 1 ವರ್ಷದವರೆಗೆ ಅವುಗಳ ಬೆಳವಣಿಗೆ ಇರುವುದಿಲ್ಲ. ನಂತರ ಅವುಗಳ ಬೆಳವಣಿಗೆ ಆಗಿ ಒಂದೂವರೆ ವರ್ಷದ ನಂತರ ಆದಾಯ ಚೆನ್ನಾಗಿ ಬರುತ್ತದೆಂದು ಹೇಳುತ್ತಾರೆ.

ಮೀನು ಮರಿಗಳನ್ನು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಮಾತ್ರ ನೀರಲ್ಲಿ ಬಿಟ್ಟು ಸಾಕಾಣಿಕೆ ಮಾಡಬಹುದು. ವಿಶೇಷವಾಗಿ ಮೀನು ಮರಿಗಳನ್ನು ಸವದತ್ತಿ ರೇಣುಕಾ ಜಲಾಶಯ, ಘಟಪ್ರಭಾ ಮತ್ತು ಹೊಸಪೇಟೆ ಫಾರ್ಮ್ಗಳಲ್ಲಿ 1 ಸಾವಿರ ಮರಿಗೆ 1 ಸಾವಿರ ರೂಪಾಯಿ ಕೊಟ್ಟು ತರಲಾಗುತ್ತದೆ. ಕಾಟ್ಲಾ ಮೀನು, ರೋವು ಮೀನು, ಜಿಲೇಬಿ ಮೀನು, ಗೌರಿ ಮೀನು ಮುಂತಾದ ಮರಿಗಳನ್ನು ತಂದು ಸಾಕಲಾಗುತ್ತದೆ. ಇದಕ್ಕೆಲ್ಲ ಮಾರುಕಟ್ಟೆಯಲ್ಲಿ ಆಹಾರ ಲಭ್ಯವಿದೆ. ಅಲ್ಲದೇ, ಶೇಂಗಾ ಹಿಂಡಿ, ಸಗಣಿ ಹಾಕಬಹುದು. ವರ್ಷಕ್ಕೊಮ್ಮೆ 1 ಕೆಜಿ ಯೂರಿಯಾ ಗೊಬ್ಬರ ನೀರಲ್ಲಿ ಹಾಕಿದರೆ ಹುಳುಗಳು ಉತ್ಪಾದನೆ ಆಗುತ್ತವೆ ಇದೇ ಮೀನಿಗೆ ಆಹಾರ.

2-3 ವರ್ಷ ಕಳೆದ ನಂತರ ಪ್ರತಿಯೊಂದು ಮೀನು 10 ಕೆಜಿಗಿಂತ ಹೆಚ್ಚಿನ ತೂಕವುಳ್ಳದ್ದಾಗುತ್ತವೆ. ಮಾರುಕಟ್ಟೆಯಲ್ಲಿ 1 ಕೆಜಿ ಮೀನಿಗೆ 200 ರೂ. ವರೆಗೆ ದರ ಸಿಗುತ್ತದೆ. ಎರಡ್ಮೂರು ವರ್ಷದಲ್ಲಿ ಖರ್ಚು ವೆಚ್ಚ ತೆಗೆದು ನಾಲ್ಕೈದು ಲಕ್ಷ ರೂ.ಗಳ ಆದಾಯ ಗಳಿಸಬಹುದೆನ್ನುತ್ತಾರೆ ಉಪಕಸುಬು ಮಾಡುವ ರೈತರು.

ಸಾಕಿದ ಮೀನುಗಳನ್ನು ಗದಗ, ಸಿಂದನೂರು, ಕಡಕೋಳ, ಮುನವಳ್ಳಿ ಸೇರಿದಂತೆ ಇತರೆ ನಗರ ಪ್ರದೇಶಗಳಲ್ಲಿ ಮಾರಾಟಕ್ಕೆ ಕಳಿಸಲಾಗುತ್ತದೆ. ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗದಿದ್ದರೆ, 1 ಕೆಜಿ ಮೀನಿಗೆ ಇಂತಿಷ್ಟು ಹಣವೆಂದು ದರ ನಿಗದಿ ಮಾಡಿದರೆ, ಮೀನು ಬಲೆಯೊಂದಿಗೆ ಕೆಲವು ಜನರು ಆಗಮಿಸಿ ಮೀನುಗಳನ್ನು ತಾವಾಗಿಯೇ ಹಿಡಿದುಕೊಂಡು ಹಣ ಕೊಟ್ಟು ಹೋಗುತ್ತಾರೆ. ಈ ಮೀನು ಸಾಕಾಣಿಕೆ ಮಾಡುವ ರೈತರಿಗೆ ಶ್ರಮವಿಲ್ಲದೇ ನಾಲ್ಕೈದು ಲಕ್ಷ ರೂಪಾಯಿ ಗಳಿಸಬಹುದು ಎನ್ನುತ್ತಾರೆ ಮೀನು ಕೃಷಿಕರು. ಈ ಕಾಯಕಕ್ಕಾಗಿ ಜಿಲ್ಲಾ ಮೀನುಗಾರಿಕೆ ಇಲಾಖೆ ನಡೆಸುವ ತರಬೇತಿ ಶಿಬಿರ ಹಾಗೂ ತಜ್ಞರಿಂದ ಮಾರ್ಗದರ್ಶನ ಪಡೆಯಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!