ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಹತ್ತು ವಿಶ್ವವಿದ್ಯಾಲಯಗಳ ಪೈಕಿ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರು ಕೇಂದ್ರ ಸರ್ಕಾರದಿಂದ ಹಣ ಕೊಡಿಸಲಿ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಹೇಳಿದರು.
ಸರ್ಕಾರದ ಮುಂದೆ ಯಾವುದೇ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಸ್ತಾಪವಿಲ್ಲ. ಬಿಜೆಪಿ ಸರ್ಕಾರ ಈ ವಿಶ್ವವಿದ್ಯಾಲಯಗಳಿಗೆ ಕೇವಲ 2 ಕೋಟಿ ರೂ.ಗಳನ್ನು ಮಾತ್ರ ಮಂಜೂರು ಮಾಡಿತ್ತು. 2 ಕೋಟಿ ರೂ.ಗಳೊಂದಿಗೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಶ್ವವಿದ್ಯಾಲಯ ಸ್ಥಾಪನೆಗೆ ನೂರಾರು ಎಕರೆ ಜಾಗ ಬೇಕು. ಬೆಂಗಳೂರು ವಿಶ್ವವಿದ್ಯಾಲಯ ಮಾಡುವಾಗ ಹೇಗೆ 1,200 ಎಕರೆ ಜಮೀನು ಇಟ್ಟು ಸ್ಥಾಪಿಸಿದ್ದರೋ, ಅದೇ ರೀತಿ ಇದರಲ್ಲಿ ಅರ್ಧದಷ್ಟು ಜಾಗವನ್ನಾದರೂ ಮೀಸಲಿಡಬೇಕು. ಅಲ್ಲದೆ, ಕೇವಲ ಹೆಸರಿಗಾಗಿ ವಿವಿ ಮಾಡಲು ಆಗುವುದಿಲ್ಲ. 20-30 ಕಾಲೇಜುಗಳಿಗೆ ಒಂದು ವಿವಿ ಮಾಡಲು ಸಾಧ್ಯವಿಲ್ಲ. ಕುಪಲತಿ ಹುದ್ದೆಗಾಗಿ ವಿವಿ ಮಾಡಲು ಆಗುವುದಿಲ್ಲ. ಈ ಹಿಂದೆ ಈ ಪ್ರಯತ್ನ ಮಾಡಲಾಗಿತ್ತು ಎಂದು ತಿಳಿಸಿದರು.
ಪ್ರತಿಭಟನೆ ಮಾಡುವವರು ಮಾಡುತ್ತಿರುತ್ತಾರೆ. ವಿವಿ ಮಾಡಿದ್ದೇವೆಂದು ಹೇಳುತ್ತಿರುವವರು ಆ ವಿವಿಗೆ ಎಷ್ಟು ಹಣ ನೀಡಿದ್ದರು ಎಂದು ಹೇಳಬೇಕಲ್ಲವೇ? 2 ಕೋಟಿಯಲ್ಲಿ ವಿವಿ ಮಾಡಲು ಸಾಧ್ಯವೇ? ಆ 2 ಕೋಟಿಯೂ ಬಿಡುಗಡೆಯಾಗಿಲ್ಲ. ಪ್ರತಿಭಟನೆ ಮಾಡುತ್ತಿರುವವರು ಕೇಂದ್ರ ಸರ್ಕಾರದಿಂದ ನೂರಾರು ಕೋಟಿ ಅನುದಾನ ತಂದು ಕೊಟ್ಟರೆ ಅಗತ್ಯವಿರುವ ಜಾಗ ಖರೀದಿ ಮಾಡಿ ವಿವಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.