ದೇಶಕ್ಕೆ ಆ ಎರಡು ಸಮಸ್ಯೆಗಳು ಗೆದ್ದಲಿನಂತೆ ಅಂಟಿಕೊಂಡಿವೆ: ಅವುಗಳನ್ನು ಹೊಸಕಿಹಾಕೋಣ-ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ʻಭ್ರಷ್ಟಾಚಾರ ಮತ್ತು ವಾರಸುದಾರಿಕೆʼ ಎಂಬ ಎರಡು ಸಮಸ್ಯೆಗಳು ದೇಶವನ್ನು ಗೆದ್ದಲಿನಂತೆ ಕಾಡುತ್ತಿವೆ. ಈ ಎರಡನ್ನು ಜನಜೀವನದಿಂದ ದೂರವಿಡಬೇಕು ಎಂದು ಮೋದಿ ಕರೆ ನೀಡಿದರು. ಭ್ರಷ್ಟಾಚಾರ ತೊಲಗಿದರೆ ಮಾತ್ರ ಜನ ಸಾಮಾನ್ಯರ ಬದುಕು ಹಸನಾಗುತ್ತದೆ. ಭ್ರಷ್ಟಾಚಾರವನ್ನೂ ಮನ್ನಿಸಲಾಗುತ್ತಿದೆ, ಭ್ರಷ್ಟರನ್ನು ಕ್ಷಮಿಸುವುದರಿಂದ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ಭ್ರಷ್ಟಾಚಾರ ಮತ್ತು ಭ್ರಷ್ಟರ ವಿಚಾರದಲ್ಲಿ ನಿಗಾವಹಿಸಬೇಕು ಹಾಗೂ ಭ್ರಷ್ಟಾಚಾರ ಎಸಗಿದವರನ್ನು ಕಾನೂನಿನ ಮುಂದೆ ತಪ್ಪಿತಸ್ಥರನ್ನಾಗಿ ಮಾಡಬೇಕೆಂದು ಪ್ರಧಾನಿ ಮೋದಿ ಹೇಳಿದರು.

ಉತ್ತರಾಧಿಕಾರದ ರಾಜಕಾರಣ ದೇಶದ ಅಭಿವೃದ್ಧಿಗೆ ಮಾರಕ ಎಂಬ ಮಾತನ್ನು ಪ್ರಧಾನಿ ಹೇಳಿದರು. ಸ್ವಜನಪಕ್ಷಪಾತ ಮತ್ತು ಪಿತ್ರಾರ್ಜಿತ ರಾಜಕಾರಣದಿಂದಾಗಿ ಅನೇಕರಿಗೆ ಪ್ರತಿಭೆ ಇದ್ದರೂ ಅವಕಾಶಗಳು ಸಿಗುತ್ತಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟಲ್ಲವೇ ಎಂದರು. ವಾರಸತ್ವ ರಾಜಕಾರಣ ವಿರೋಧಿ ಆಂದೋಲನದಲ್ಲಿ ಭಾಗವಹಿಸಿ ಭಾರತವನ್ನು ಅದರಿಂದ ಮುಕ್ತಗೊಳಿಸಲು ಪ್ರತಿಜ್ಞೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರನ್ನು ಕೇಳಿಕೊಂಡರು.

ಮುಂದಿನ 25 ವರ್ಷಗಳು ಅತ್ಯಂತ ಮಹತ್ವದ್ದಾಗಿದ್ದು, ಜನರ ಆಶೋತ್ತರಗಳನ್ನು ಈಡೇರಿಸಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡುವ ಸಮಯ ಬಂದಿದೆ ಎಂದರು. ದೇಶದ ಅಭಿವೃದ್ಧಿಯ ಭಾಗವಾಗಿ ನಾವೆಲ್ಲರೂ ಐದು ಅಂಶಗಳ ಮೇಲೆ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಪ್ರಧಾನಿ ಹೇಳಿದರು. ಅವುಗಳಲ್ಲಿ, ದೇಶದ ಪ್ರತಿಯೊಂದು ಪ್ರದೇಶವೂ ಅಭಿವೃದ್ಧಿ ಹೊಂದಬೇಕು, ಗುಲಾಮಗಿರಿಯ ಕಲ್ಪನೆಯನ್ನು ಮನಸ್ಸಿನಿಂದ ತೊಡೆದುಹಾಕಬೇಕು. ಅದೇ ರೀತಿ 130 ಕೋಟಿ ಭಾರತೀಯರಲ್ಲಿ ಒಗ್ಗಟ್ಟು ಇರಬೇಕು, ಜನರು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಪ್ರತಿಯೊಬ್ಬ ನಾಗರಿಕರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದು ಮೋದಿ ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!