ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಬಲ ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಸಾವಿರಾರು ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.
ಪೂರ್ವ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಚಂಡಮಾರುತದ ಹಿನ್ನೆಲೆಯಲ್ಲಿ ನಿವಾಸಿಗಳು ಮನೆಯೊಳಗೆ ಸುರಕ್ಷಿತವಾಗಿ ಉಳಿಯುವಂತೆ ಹಾಗೂ ಹೊರ ಬರದಂತೆ ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಷಿಂಗ್ಟನ್ ಪ್ರದೇಶದಲ್ಲಿ ಸಂಜೆ 5 ಗಂಟೆಯ ನಂತರ ಧಾರಾಕಾರ ಮಳೆಯಾಗುತ್ತಿದೆ. ಅದರ ಪರಿಣಾಮ ವಿದ್ಯುತ್ ಇಲ್ಲದೆ ಜನ ಕಾಲಕಳೆಯುವಂತಾಗಿದೆ. ಮಂಗಳವಾರವೂ ಇದೇ ಪರಿಸ್ಥಿತಿ ಇರಲಿದೆ ಎಂದು ಇಲ್ಲಿನ ರಾಷ್ಟ್ರೀಯ ಹವಾಮಾನ ಇಲಾಖೆಯು ಮಾಹಿತಿ ರವಾನಿಸಿದೆ.
ಸೋಮವಾರ ಮಧ್ಯಾಹ್ನದ ವೇಳೆಗೆ 1,300ಕ್ಕೂ ಹೆಚ್ಚು ಅಮೆರಿಕದ ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಅದಲ್ಲದೆ ಸುಮಾರು 5,500ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿತ್ತು ಎಂದು ಫ್ಲೈಟ್ ಟ್ರ್ಯಾಕಿಂಗ್ ಸೇವೆ ಫ್ಲೈಟ್ಅವೇರ್ ಸಂಸ್ಥೆ ಹೇಳಿದೆ.
ಮಳೆ , ಗಾಳಿ, ಮಿಂಚು ಸಹಿತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ವಾಷಿಂಗ್ಟನ್ ಡಿಸಿಯ ಎಲ್ಲ ಫೆಡರಲ್ ಕಚೇರಿಗಳನ್ನು ಸೋಮವಾರದಂದು ಮಧ್ಯಾಹ್ನವೇ ಮುಚ್ಚಲಾಯಿತು. ಕೆಲಸ ಸ್ಥಗಿತಗೊಳಿಸಿ ಎಲ್ಲ ಸಿಬ್ಬಂದಿಗೆ ಮನೆಗಳಿಗೆ ತೆರಳುವಂತೆ ಸೂಚಿಸಲಾಯಿತು. ಸುಮಾರು 580,000 ಕ್ಕೂ ಹೆಚ್ಚು ಜನರು ಚಂಡಮಾರುತದಿಂದಾಗಿ ತೊಂದರೆ ಅನುಭವಿಸಿದರು. ಪರಿಸ್ಥಿತಿಯನ್ನು ಎದುರಿಸಲು ಅಮೆರಿಕ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ.