ಹೊಸದಿಗಂತ ವರದಿ ಮೈಸೂರು:
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ರಿಗೆ ಬೆದರಿಕೆ ಕರೆ ಮಾಡಿದ್ದ ಆರೋಪದ ಮೇಲೆ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ದೂರವಾಣಿ ಕರೆಯಲ್ಲಿ ಎಂ ಲಕ್ಷ್ಮಣ್‌ಗೆ ಹೆಚ್.ಡಿ. ಕುಮಾರಸ್ವಾಮಿ ಬಗ್ಗೆ ಮಾತನಾಡದಂತೆ ಅವಾಜ್ ಹಾಕಿದ್ದ ಹಿನ್ನಲೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರ ಮೇಲೆ ಎಂ ಲಕ್ಷ್ಮಣ್
ಅಕ್ಟೋಬರ್ 28 ರಂದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ನಿರಂತರವಾಗಿ ನನಗೆ ಹೆಚ್ಡಿಕೆ ಅಭಿಮಾನಿಗಳು ಜೆಡಿಎಸ್ ಕಾರ್ಯಕರ್ತರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ.
ನಮ್ಮ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದಿದ್ದಾರೆ. ಅಷ್ಟೇ ಅಲ್ಲದೆ ನನ್ನ ಮೇಲೆ ಅಟ್ಯಾಕ್ ಮಾಡುತ್ತೇವೆ ಎಂದು ಬೆದರಿಕೆ ಕರೆ ಮಾಡುತ್ತಿದ್ದಾರೆ. ಹೀಗಾಗಿ ನನಗೆ ರಕ್ಷಣೆ, ಬೆದರಿಕೆ ಕರೆ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದರು. ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ
ಎಂ.ಲಕ್ಷ್ಮಣ್‌ಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದವರ ಮೇಲೆ ನಗರದ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆರೋಪಿಗಳ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ಸೈಬರ್ ತನಿಖೆ ನಡೆಸುತ್ತಿದ್ದಾರೆ.