ಪಾಡಿಶ್ರೀ ಇಗ್ಗುತ್ತಪ್ಪ ದೇವಾಲಯದ ಕಟ್ಟುಪಾಡುಗಳಿಗೆ ಧಕ್ಕೆ : ಪರದಂಡ ಕುಟುಂಬಸ್ಥರ ಆರೋಪ

ಹೊಸದಿಗಂತ ವರದಿ ಮಡಿಕೇರಿ:

ಪಾಡಿಶ್ರೀ ಇಗ್ಗುತ್ತಪ್ಪ ದೇವಾಲಯದ ನವೀಕರಣದ ಹೆಸರಿನಲ್ಲಿ ದೇವಾಲಯದ ಕಟ್ಟುಪಾಡುಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ದೇವಾಲಯದ ದೇವತಕ್ಕರಾದ ಪರದಂಡ ಕುಟುಂಬಸ್ಥರು ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವತಕ್ಕ ಪರದಂಡ ಸುಬ್ರಮಣಿ ಮಾತನಾಡಿ, ದೇವಾಲಯದ ಮುಂಭಾಗದ ಪೂರ್ವ ಭಾಗಕ್ಕಿರುವ ಮೆಟ್ಟಿಲುಗಳು ನವೀಕರಣಗೊಂಡಿದ್ದು, ಅನಾದಿ ಕಾಲದಿಂದಲೂ ಈ ಮೆಟ್ಟಿಲುಗಳನ್ನು ಹತ್ತಿ ಬರುವುದು ನಿಷೇಧಿಸಲಾಗಿದೆ. ವಿಶೇಷ ಸಂದರ್ಭದಲ್ಲಿ ಸತ್ಯ ಪ್ರಮಾಣ ಮಾಡುವವರು ಮಾತ್ರ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಮಟ್ಟಿಲೇರಿ ಬರಲು ಅವಕಾಶ ನೀಡಲಾಗುತ್ತದೆ. ಆದರೆ, ಈ ಮೆಟ್ಟಿಲನ್ನು ಕೆಲವರು ಹೆಬ್ಬಾಗಿಲಾಗಿ ಬಿಂಬಿಸಿ ಭಕ್ತಾದಿಗಳಿಗೆ ಪ್ರವೇಶ ಕಲ್ಪಿಸಲು ಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಭಕ್ತರು ದೇವಾಲಯದ ವಾಯುವ್ಯ ದಿಕ್ಕಿನಲ್ಲಿರುವ ದ್ವಾರದ ಮೂಲಕ ಆಗಮಿಸಿ ಪಾವಿತ್ರತ್ಯೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು. ಪೂರ್ವ ಭಾಗದ ಮೆಟ್ಟಿಲಿನಿಂದ ಪ್ರವೇಶ ಮಾಡುವುದು ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಇದು ಹಿಂದಿನಿಂದಲೂ ಜಾರಿಯಲ್ಲಿದ್ದ ನಿಯಮಗಳಿಗೆ, ದೇವರ ಸ್ಥಳ ಮಹಿಮೆಗೆ ಧಕ್ಕೆ ತರುವಂತಿದೆ. ದೇವಾಲಯದ ನವೀಕರಣದ ಜೊತೆಗೆ ಹಲವು ಕಾಮಗಾರಿಗಳು ನಡೆದಿದೆ. ಇದಕ್ಕೆ ನಮ್ಮ ವಿರೋಧವಿಲ್ಲ, ಆದರೆ, ಈ ಹಿಂದಿನ ಸಂಪ್ರದಾಯದಂತೆ ವಿಧಿವಿಧಾನಗಳು ನಡೆಯಬೇಕು ಎಂದು ಆಗ್ರಹಿಸಿದರು.

ದೇವತಕ್ಕ ಪರದಂಡ ವಿಠಲ ಭೀಮಯ್ಯ ಮಾತನಾಡಿ, ಭಕ್ತ ಜನಸಂಘದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದ್ದು, ನಡಾವಳಿ ಪುಸ್ತಕದಲ್ಲಿ ಮೆಟ್ಟಿಲುಗಳನ್ನು ಹತ್ತಿ ಪ್ರವೇಶಿಸುವುದನ್ನು ನಿಷೇಧಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೆ ದೇವಸ್ಥಾನದ ಪೂಜಾ ಕಾರ್ಯ, ಹಬ್ಬ, ಉತ್ಸವ ಇತ್ಯಾದಿಗಳ ಕುರಿತು ಜ್ಯೋತಿಷ್ಯ ಮಾಹಿತಿಗಳನ್ನು ಪತ್ರಿಕಾ ಪ್ರಕಟಣೆ ನೀಡುವ ಜವಾಬ್ದಾರಿ ಪರದಂಡ ಕುಟುಂಬಸ್ಥರದ್ದು ಆಗಿದೆ. ಆದರೆ ಪರದಂಡ ಮನೆತನದವರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುವ ಕಾರ್ಯ ಕೆಲವರಿಂದ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪರದಂಡ ಕುಟುಂಬದ ಪಟ್ಟೆದಾರ ಮತ್ತು ತಕ್ಕಮುಖ್ಯಸ್ಥ ಬಿ.ಅಪ್ಪಣ್ಣ, ದೇವತಕ್ಕರಾದ ಪರದಂಡ ಮುದ್ದು ಸುಬ್ರಮಣಿ ಹಾಗೂ ಪರದಂಡ ಸದಾ ನಾಣಯ್ಯ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!