ತ್ರಿವಳಿ ತಲಾಖ್ ವಿವಾಹ ವ್ಯವಸ್ಥೆಗೆ ಮಾರಕ: ಸುಪ್ರೀಂ ಕೋರ್ಟ್​ಗೆ ಹೊಸ ಅಫಿಡವಿಟ್​ ಸಲ್ಲಿಸಿದ ಕೇಂದ್ರ ಸರಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತ್ರಿವಳಿ ತಲಾಖ್ ವಿರುದ್ಧದ ತನ್ನ 2019 ಕಾನೂನನ್ನು ಕೇಂದ್ರ ಸರಕಾರ ಸಮರ್ಥಿಸಿಕೊಂಡಿದೆ. ಈ ಪದ್ಧತಿಯು ವಿವಾಹ ವ್ಯವಸ್ಥೆಗೆ ಮಾರಕ ಎಂದು ಸುಪ್ರೀಂಕೋರ್ಟ್‌ನಲ್ಲಿ ಇಂದು ಹೊಸ ಅಫಿಡವಿಟ್ ಸಲ್ಲಿಸಿದೆ.

2019ರಕಾಯ್ದೆಯು ವಿವಾಹಿತ ಮುಸ್ಲಿಂ ಮಹಿಳೆಯರ ಲಿಂಗ ಸಮಾನತೆಯ ಸಾಂವಿಧಾನಿಕ ಹಕ್ಕುಗಳನ್ನು ಕಾಪಾಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ತ್ರಿವಳಿ ತಲಾಖ್ ಪದ್ಧತಿಯನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿರುವುದರಿಂದ ಅದನ್ನು ಅಪರಾಧವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಸುಪ್ರಿಂ ಕೋರ್ಟ್​​ಗೆ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.

ತ್ರಿವಳಿ ತಲಾಖ್ ಪದ್ಧತಿಯು ವಿವಾಹ ವ್ಯವಸ್ಥೆಯ ಸಾಮಾಜಿಕ ಸಂಸ್ಥೆಗೆ ಮಾರಕ. ಮುಸ್ಲಿಂ ಮಹಿಳೆಯರ ಸ್ಥಿತಿಯನ್ನು ಕರುಣಾಜನಕ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಸೋಮವಾರ ಅಫಿಡವಿಟ್ ನಲ್ಲಿ ಹೇಳಿದೆ.

2017 ರಲ್ಲಿ ಸುಪ್ರೀಂಕೋರ್ಟ್ ಈ ಪದ್ಧತಿಯನವ್ನು ರದ್ದುಗೊಳಿಸಿದ್ದರೂ, ಸಮುದಾಯದಲ್ಲಿ ವಿಚ್ಛೇದನಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಸಾಕಷ್ಟು ನಿರೋಧಕವಾಗಿ ಕೆಲಸ ಮಾಡಿಲ್ಲ ಎಂದು ಕೇಂದ್ರ ಹೇಳಿದೆ.

ತ್ರಿವಳಿ ತಲಾಖ್ ಸಂತ್ರಸ್ತರಿಗೆ ಪೊಲೀಸರನ್ನು ಸಂಪರ್ಕಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಕಾನೂನಿನಲ್ಲಿ ದಂಡನಾತ್ಮಕ ಸೆಕ್ಷನ್​ಗಳು ಇಲ್ಲದ ಕಾರಣ ತಪ್ಪೆಸಗುವರರ ವಿರುದ್ಧ ಪೊಲೀಸರಿಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರವಾಗಿ ಕಾನೂನು ರಚನೆಯ ತುರ್ತು ಅಗತ್ಯವಿತ್ತು ಎಂದು ಸರ್ಕಾರ ಹೇಳಿದೆ.

ಸಮಸ್ತ ಕೇರಳ ಜಮಿಯತುಲ್ ಉಲೇಮಾ ಈ ತಿಂಗಳ ಆರಂಭದಲ್ಲಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಅದು ತನ್ನನ್ನು “ಪ್ರಸಿದ್ಧ ಸುನ್ನಿ ವಿದ್ವಾಂಸರ ಸಂಘ” ಎಂದು ಹೇಳಿಕೊಂಡಿದೆ. ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ ಅಸಂವಿಧಾನಿಕ ಎಂದು ಅರ್ಜಿದಾರರು ಹೇಳಿದ್ದಾರೆ. ಈ ಕಾಯ್ದೆಯು ಭಾರತೀಯ ನಾಗರಿಕರಿಗೆ ಕಾನೂನಿನ ಸಮಾನತೆಯನ್ನು ಕಡಿಮೆ ಮಾಡುತ್ತದೆ. ಧರ್ಮದ ಆಧಾರದ ಮೇಲೆ ತಾರತಮ್ಯ ನಿಷೇಧಿಸುವುದು ಸೇರಿದಂತೆ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಅರ್ಜಿದಾರರ ಹೇಳಿಕೆ ತಳ್ಳಿಹಾಕಿದ ಸರಕಾರ
ತ್ರಿವಳಿ ತಲಾಖ್ ಪದ್ಧತಿಯು ಸಂವಿಧಾನದ ಅಡಿಯಲ್ಲಿ ಮಹಿಳೆಯರಿಗೆ ಖಾತರಿಪಡಿಸಿದ ಮೂಲಭೂತ ಹಕ್ಕುಗಳು ಮತ್ತು ಸಮಾನತೆಯ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸುವ ಮೂಲಕ ಸರ್ಕಾರವು ಅರ್ಜಿದಾರರ ಹೇಳಿಕೆಗಳನ್ನು ತಳ್ಳಿಹಾಕಿದೆ. ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ಪಡೆಯುವ ವಿವಾಹಿತ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಸಂಸತ್ತು ತನ್ನ ಈ ಕಾಯ್ದೆಯನ್ನು ಜಾರಿಗೆ ತಂದಿದೆ. ಲಿಂಗ ನ್ಯಾಯ ಮತ್ತು ವಿವಾಹಿತ ಮುಸ್ಲಿಂ ಮಹಿಳೆಯರ ಸಮಾನತೆಯ ಸಾಂವಿಧಾನಿಕ ಗುರಿಗಳನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಅಫಿಡವಿಟ್​​ನಲ್ಲಿ ತಿಳಿಸಲಾಗಿದೆ.

ಸಂಸತ್ತು ಅಂಗೀಕರಿಸಿದ ಕಾನೂನುಗಳ ಶ್ರೇಷ್ಠತೆ ಅಥವಾ ಕಾನೂನು ಏನಾಗಿರಬೇಕು ಎಂಬುದನ್ನು ಚರ್ಚೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಅಭಿಪ್ರಾಯಪಟ್ಟಿತ್ತು ಎಂದು ಸರ್ಕಾರ ಅಪಿಡವಿಟ್​ನಲ್ಲಿ ಗಮನಸೆಳೆದಿದೆ.

ಒಂದು ನಿರ್ದಿಷ್ಟ ರೀತಿಯ ನಡವಳಿಕೆಯನ್ನು ಅಪರಾಧವೇ ಅಥವಾ ಅಲ್ಲವೇ? ಅಂತಹ ನಡವಳಿಕೆಗೆ ಯಾವ ಶಿಕ್ಷೆ ವಿಧಿಸಬೇಕು ಎಂಬುದನ್ನು ಚಾಲ್ತಿಯಲ್ಲಿರುವ ಸಾಮಾಜಿಕ ಪರಿಸ್ಥಿತಿಗಳ ಅಡಿಯಲ್ಲಿ ಶಾಸಕಾಂಗ ನಿರ್ಧರಿಸಿದೆ ಎಂದು ಅಫಿಡವಿಟ್​​ ಹೇಳಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!