ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಾಯುಕ್ತ ಇನ್‌ಸ್ಪೆಕ್ಟರ್ ಹೆಸರಿನಲ್ಲಿ ಕಾರ್ಯಪಾಲಕ ಇಂಜಿನಿಯರ್‌ಗೆ ಕರೆ ಮಾಡಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಟ್ಟೇಗಾರಪಾಳ್ಯದ ತ್ಯಾಗರಾಜ್ ಬಂಧಿತ ಆರೋಪಿ. ಈತ ಶಿರಾ ವಿಭಾಗದ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಇಂಜಿನಿಯರ್ ಕೆ.ಬಿ. ರಾಮದಾಸಪ್ಪ ಅವರಿಗೆ ಕರೆ ಮಾಡಿದ್ದಾನೆ. ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಮುಕ್ತಾಯಗೊಳಿಸಲು ನೀವು ಮೇಲಾಧಿಕಾರಿಗಳೊಂದಿಗೆ ದೊಡ್ಡ ಮಟ್ಟದಲ್ಲಿ ವ್ಯವಹಾರ ಮಾಡಬೇಕು ಎಂದಿದ್ದಾನೆ. ಆಗ ರಾಮದಾಸಪ್ಪ ಅವರು ಯಾವುದೋ ಫೇಕ್ ಕಾಲ್ ಇರಬೇಕು ಎಂದು ಸುಮ್ಮನಾಗಿದ್ದಾರೆ.
ಆದರೆ ಮತ್ತೊಂದು ದಿನ ಕರೆ ಬಂದಿದ್ದು, ಆರೋಪಿಯು ನಾನು ಲೋಕಾಯುಕ್ತ ಇನ್‌ಸ್ಪೆಕ್ಟರ್ ಎಂದು ಹೇಳಿಕೊಂಡಿದ್ದಾನೆ. ನಮ್ಮ ಎಡಿಜಿಪಿ ಸಾಹೇಬರು ನಿಮ್ಮ ಜೊತೆ ಮಾತನಾಡುತ್ತಾರೆ ಎಂದು ಹೇಳಿ ಧ್ವನಿ ಬದಲಾಯಿಸಿ ಆತನೇ ಮತ್ತೆ ಮಾತನಾಡಿ, ನಿಮ್ಮ ಮೇಲೆ ಆರೋಪ ಕೇಳಿ ಬಂದಿದೆ. ಅದನ್ನು ಮುಕ್ತಾಯಗೊಳಿಸಲು ನಮ್ಮ ಲೋಕಾಯುಕ್ತ ಇನ್‌ಸ್ಪೆಕ್ಟರ್ ಭೇಟಿ ಮಾಡಿ ಎಂದು ತಿಳಿಸಿದ್ದಾನೆ.
ಇದರಿಂದ ಅನುಮಾನಗೊಂಡ ರಾಮದಾಸಪ್ಪ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ಆರೋಪಿ ತ್ಯಾಗರಾಜ್ ನನ್ನು ಬಂಧಿಸಿದ್ದಾರೆ.