ಹೊಸದಿಗಂತ ವರದಿ ಮಡಿಕೇರಿ:
ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಡಹಗಲೇ ಕಾಡಾನೆಯೊಂದು ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಸೋಮವಾರ ಬೆಳಗ್ಗೆ ಸುಮಾರು 6 ಗಂಟೆ ಸಮಯದಲ್ಲಿ ಕೈಲಾಸ ಆಶ್ರಮ ಬಳಿಯ ತಲಕಾವೇರಿ ಪ್ರವೇಶ ದ್ವಾರದ ಭಾಗದಲ್ಲಿ ಕಾಡಾನೆ ತಿರುಗಾಡಿದೆ. ದ್ವಾರದ ಗೇಟ್ ಬಂದ್ ಮಾಡಿದ್ದರಿಂದ ಆನೆಗೆ ತಲಕಾವೇರಿ ಒಳಗೆ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದು ತುಲಾ ಮಾಸವಾಗಿದ್ದು, ಕಾವೇರಿ ಜಾತ್ರೆಯ ಅವಧಿಯಾಗಿದೆ. ಪ್ರತಿದಿನ ಸಾವಿರಾರು ಭಕ್ತರು ತಲಕಾವೇರಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಸುತ್ತಲೂ ಬೆಟ್ಟ, ಕಾಡುಗಳಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ಏಕಾಏಕಿ ಕಾಡಾನೆಗಳು ನುಗ್ಗಿ ಬಂದರೆ ಅಪಾಯ ತಪ್ಪಿದ್ದಲ್ಲ ಅಂತಿದಾರೆ ಗಾಮಸ್ಥರು.
ಈಗಾಗಲೇ ಕಾಡಾನೆ ಏಲಕ್ಕಿ ಮತ್ತು ಬಾಳೆ ಫಸಲನ್ನು ನಾಶಪಡಿಸಿದೆ. ಆನೆಯನ್ನು ಓಡಿಸುವಂತೆ ಈ ಭಾಗದ ನಿವಾಸಿಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ಪಕ್ಕದ ಕಾಡಿನಲ್ಲಿ ಆನೆ ಇರುವುದನ್ನು ಪತ್ತೆ ಹಚ್ಚಿ, ಸ್ಥಳೀಯರ ಸಹಕಾರ ಪಡೆದು ಅದನ್ನು ಮರಳಿ ಕಾಡಿಗೆ ಅಟ್ಟುವಲ್ಲಿ ಸಫಲರಾಗಿದ್ದಾರೆ.