ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತಿ ವಿಷಕಾರಿ ಹಾವು ಹಾಗೂ ಹಾವಿನ ವಿಷವನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಸತ್ಪಾಲ್, ಶ್ಯಾಮ್ ನಾಥ್ ಮತ್ತು ಪಪ್ಪು ನಾಥ್ ಬಂಧಿತ ಆರೋಪಿಗಳು. ಇವೆರಲ್ಲರೂ ಯುಪಿಯ ಮಥುರಾ ನಗರದ ನಿವಾಸಿಗಳೆಂದು ತಿಳಿದುಬಂದಿದೆ. 10 ಗ್ರಾಂ ಹಾವಿನ ವಿಷವನ್ನು ಒಂದೂವರೆ ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಗಾಜಿಯಾಬಾದ್‌ನಲ್ಲಿ ಮಧ್ಯವರ್ತಿಯೊಬ್ಬರಿಗೆ ಮಾರಾಟ ಮಾಡಲು ಹಾವುಗಳನ್ನು ಹಿಡಿದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಮಥುರಾ ಪೊಲೀಸರು ಮೂವರು ಆರೋಪಿಗಳಿಂದ ನಾಲ್ಕು ಹೆಬ್ಬಾವು ಮತ್ತು ಮೂರು ನಾಗರಹಾವುಗಳನ್ನು ವಶಪಡಿಸಿಕೊಂಡಿದ್ದಾರೆ. ಹಾವುಗಳ ಚರ್ಮದಿಂದ ಬೆಲ್ಟ್, ಬ್ಯಾಗ್ ಮತ್ತು ಶೂಗಳಲ್ಲಿ ಬಳಸಲು ಸಹ ಸರಬರಾಜು ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಈ ಕಳ್ಳಸಾಗಣೆದಾರರು ಭ್ರಷ್ಟ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಉದ್ಯಾನವನದ ನೌಕರರೊಂದಿಗೆ ಶಾಮೀಲಾಗಿ ಹಾವಿನ ವಿಷ ಮತ್ತು ಚರ್ಮವನ್ನು ಮಾರಾಟ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ ಎಂದು ಪೀಪಲ್ ಫಾರ್ ಅನಿಮಲ್ಸ್ ಸದಸ್ಯರು ಆರೋಪಿಸಿದ್ದಾರೆ. ಪ್ರಸ್ತುತ ಈ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ. ಘಾಜಿಯಾಬಾದ್ ಮೂಲದ ಮಾಸ್ಟರ್ ಮೈಂಡ್ ನಿಖಿಲ್ ಸಿಸೋಡಿಯಾ ಸೇರಿದಂತೆ ಇತರೆ ಸಹಚರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.