ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 8 ರ ಕೊಳೆಗೇರಿಯಲ್ಲಿ ಮುಂಜಾನೆ ಸಂಭವಿಸಿದ ಬೆಂಕಿಯಲ್ಲಿ ಮೂವರು ಅಪ್ರಾಪ್ತ ಬಾಲಕಿಯರು ತೀವ್ರ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಡೆದ ಘಟನೆಯಲ್ಲಿ ಅವರ ತಂದೆ ಮತ್ತು ತಾಯಿಗೂ ಸುಟ್ಟ ಗಾಯಗಳಾಗಿವೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬೆಂಕಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಬೆಳಗಿನ ಜಾವ 3.00 ರಿಂದ 4.00 ರ ನಡುವೆ ಬೆಂಕಿ ಕಾಣಿಸಿಕೊಂಡಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೀಶ್ ವರ್ಮಾ ಖಚಿತಪಡಿಸಿದ್ದಾರೆ. “ನಮಗೆ ತಕ್ಷಣ ಮಾಹಿತಿ ನೀಡಲಾಯಿತು, ಮತ್ತು ಪೊಲೀಸರು ಮತ್ತು ಅಗ್ನಿಶಾಮಕ ದಳದ ಇಬ್ಬರೂ ಪ್ರತಿಕ್ರಿಯಿಸಿದರು. ಫೋರೆನ್ಸಿಕ್ ತಂಡವು ತನಿಖೆ ನಡೆಸುತ್ತಿದೆ” ಎಂದು ಅವರು ಹೇಳಿದರು.
ಬೆಂಕಿ ಹೊತ್ತಿಕೊಂಡಾಗ ಗುಡಿಸಲಿನೊಳಗೆ ಮೂವರು ಹುಡುಗಿಯರು ಸೇರಿದಂತೆ ಐವರು ಇದ್ದರು ಎಂದು ಡಿಎಂ ವರ್ಮಾ ಹೇಳಿದ್ದಾರೆ. ಬಾಲಕಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.