ಹೊಸದಿಗಂತ ವರದಿ ಮಂಡ್ಯ :
ಸಂಚಾರಿ ಪೊಲೀಸರ ತಪಾಸಣೆಯನ್ನು ತಪ್ಪಿಸಿಕೊಳ್ಳಲು ಯುವಕರು ಬ್ಯಾರಿಕೇಟ್ ಹಾಗೂ ಮತ್ತೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ನಗರದ ನಂದಾ ಸರ್ಕಲ್‌ನಲ್ಲಿ ನಡೆದಿದೆ.
ಮಂಡ್ಯದ ಅಜಯ್ (25), ತಾಲೂಕಿನ ಹೊಡಾಘಟ್ಟದ ಚಂದನ್ (25) ಹಾಗೂ ಹಾಲಹಳ್ಳಿ ಸ್ಲಂ ನಿವಾಸಿ ಬತುಲಾ (60) ಎಂಬುವರೇ ಗಾಯಗೊಂಡವರಾಗಿದ್ದಾರೆ
ಸಂಚಾರಿ ಪೊಲೀಸರು ಹೆದ್ದಾರಿಯ ಪೂರ್ವ ಪೊಲೀಸ್ ಠಾಣೆ, ನಂದಾ ವೃತ್ತದಲ್ಲಿ ಹೆಲ್ಮೆಟ್ ಧರಿಸದೆ ಸವಾರಿ ಮಾಡುತ್ತಿದ್ದವರನ್ನು ಹಿಡಿದು ದಂಡ ಹಾಕುವ ಕಾರ‌್ಯದಲ್ಲಿ ತೊಡಗಿದ್ದರು. ಈ ವೇಳೆ ಚಂದನ್ ಮತ್ತು ಅಜಯ್ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆ ಬರುತ್ತಿದ್ದುದನ್ನು ಕಂಡ ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದರು. ಆದರೆ ಯುವಕರು ಅತಿ ವೇಗದಲ್ಲಿ ಬೈಕ್ ಚಲಾಸಿ ತಪ್ಪಿಸಿಕೊಳ್ಳಲು ಯತ್ನಿಸಿದರು.
ಸ್ಥಳದಲ್ಲೇ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯೊಬ್ಬರು ರಸ್ತೆಯಲ್ಲಿಡಲಾಗಿದ್ದ ಬ್ಯಾರಿಕೇಟ್‌ನ್ನು ಬೈಕ್‌ಗೆ ಅಡ್ಡಲಾಗಿ ಎಳೆದರು. ಗಾಬರಿಗೊಳಗಾದ ಸವಾರ ಬ್ಯಾರಿಕೇಟ್‌ಗೆ ಗುದ್ದಿ ಮುಂದಕ್ಕೆ ಚಲಾಯಿಸಿದ್ದ. ಪಕ್ಕದಲ್ಲೇ ಬರುತ್ತಿದ್ದ ಮತ್ತೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬತುಲಾ ಅವರು ಕೆಳಗೆ ಬಿದ್ದು ಮೂವರೂ ಗಾಯಗೊಂಡರು.