ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು (ಭಾನುವಾರ) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಜ್ಯದ ಇಬ್ಬರು ಪೊಲೀಸರು ಸೇರಿದಂತೆ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಪುತಲಪುಟ್ಟು ಬಳಿ ವೇಗವಾಗಿ ಬಂದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಿದ್ದೆಮಂಪರಿನಲ್ಲಿ ಕಾರು ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ.
ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಹಿಡಿಯುವ ಸಲುವಾಗಿ ಶಿವಾಜಿನಗರ ಪೊಲೀಸ್ ಸಿಬ್ಬಂದಿ ಆಂಧ್ರಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಶಿವಾಜಿನಗರ ಠಾಣೆಯ ಪಿಎಸ್ಐ ಅವಿನಾಶ್, ಕಾನ್ಸ್ಟೇಬಲ್ ಅನಿಲ್ ಮುಲಿಕ್ ಹಾಗೂ ಕಾರು ಚಾಲಕ ಸಾವಿಗೀಡಾಗಿದ್ದು, ಮತ್ತೊಬ್ಬ ಪಿಎಸ್ಐ ದೀಕ್ಷಿತ್, ಕಾನ್ಸ್ಟೇಬಲ್ ಶರಣಬಸವ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ತೂರು ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತಮ್ಮ ರಾಜ್ಯದ ಪೊಲೀಸರು ಸಾವನ್ನಪ್ಪಿದ್ದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಘಾತ ವ್ಯಕ್ತಪಡಿಸಿದ್ದಾರೆ. ಜನರ ಪ್ರಾಣ, ಆಸ್ತಿ ರಕ್ಷಣೆ ಮಾಡುವ ಪೊಲೀಸ್ ಸಿಬ್ಬಂದಿಯ ಸಾವು ತುಂಬಾ ದುಃಖಕರ. ಗಾಯಾಳು ಸಿಬ್ಬಂದಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಅಪಘಾತದ ಬಗ್ಗೆ ತಿಳಿದ ಕೂಡಲೇ ಬೆಂಗಳೂರಿನ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.