ಇಸ್ರೇಲ್‌ ಸ್ವಾತಂತ್ರ್ಯ ದಿನದಂದೇ ಉಗ್ರರ ಅಟ್ಟಹಾಸ; ಮೂವರು ನಾಗರಿಕರ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಸ್ರೇಲ್‌ ನ ಸ್ವಾತಂತ್ರ್ಯ ದಿನದಂದೇ ಅಟ್ಟಹಾಸ ಮೆರೆದಿರುವ ಭಯೋತ್ಪಾದಕರು ಎಲಾಡ್‌ ನಗರದಲ್ಲಿ ದಾಳಿ ನಡೆಸಿ ಮೂವರು ನಾಗರಿಕರನ್ನು ಹತ್ಯೆಗೈದಿದ್ದಾರೆ. ನಗರದಲ್ಲಿ ಸಂಚರಿಸುತ್ತಿದ್ದ ಜನರ ಮೇಲೆ ಚಾಕು, ಕೊಡಲಿಗಳಿಂದ ಅಮಾನುಷವಾಗಿ ದಾಳಿ ನಡೆಸಿರುವ ಉಗ್ರರು ಮೂವರನ್ನು ಕೊಂದಿದ್ದಾರೆ. ಘಟನೆಯಲ್ಲಿ ಮೂವರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಕ್ಷಣವೇ ಕಾರ್ಯಾಚರಣೆಗೆ ಇಳಿದಿರುವ ಸೇನಾಪಡೆಗಳು ನಗರದ ರಸ್ತೆಗಳನ್ನು ಬಂದ್‌ ಮಾಡಿ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಉಗ್ರರ ಬೇಟೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಮತ್ತು ಸೇನಾ ಘಟಕಗಳು ಭಯೋತ್ಪಾದಕರನ್ನು ಹಿಂಬಾಲಿಸುತ್ತಿವೆ.
ಇಸ್ರೇಲ್‌ನ ವಿದೇಶಾಂಗ ಸಚಿವ ಯೈರ್ ಲ್ಯಾಪಿಡ್ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ವಾತಂತ್ರ್ಯ ದಿನದ ಸಂತೋಷವನ್ನು ಉಗ್ರರು ಕ್ಷಣಾರ್ಧದಲ್ಲಿ ನಾಶಪಡಿಸಿದ್ದಾರೆ. ಕೊಲೆಗಾರರಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಹೇಳಿದ್ದಾರೆ. ಗಂಭೀರವಾಗಿ ಗಾಯಗೊಂಡವರು 35-60 ವಯಸ್ಸಿನ ಪುರುಷರು ಎಂದು ತೀಳಿದುಬಂದಿದೆ.ಎಲಾಡ್‌ನ 50,000 ನಿವಾಸಿಗಳಲ್ಲಿ ಹೆಚ್ಚಿನವರು ಸಂಪ್ರದಾಯಸ್ಥ ಯಹೂದಿ ಸಮುದಾಯದ ಸದಸ್ಯರಾಗಿದ್ದಾರೆ, ಇವರನ್ನು ಹರೆಡಿಮ್ ಎಂದು ಕರೆಯಲಾಗುತ್ತದೆ.
ಇಸ್ತ್ರೇಲ್‌ ನಲ್ಲಿ ಕಳೆದವಾರ ಟೆಂಪಲ್ ಮೌಂಟ್ ಎಂದು ಕರೆಯಲ್ಪಡುವ ಜುದಾಯಿಸಂನ ಅತ್ಯಂತ ಪವಿತ್ರ ಸ್ಥಳವಾದ ಅಲ್-ಅಕ್ಸಾದಲ್ಲಿ ಘರ್ಷಣೆಗಳು ಭುಗಿಲೆದ್ದವು. ಇಲ್ಲಿ ಅಲ್-ಅಕ್ಸಾದಲ್ಲಿ ಪೊಲೀಸರು ಮತ್ತು ಪ್ಯಾಲೆಸ್ಟೀನಿಯಾದವರ ನಡುವಿನ ಘರ್ಷಣೆಯಲ್ಲಿ ಸುಮಾರು 300 ಜನರು ಗಾಯಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!