ತರಕಾರಿ ಮಾರುವವನ ಮಗಳೀಗ ನ್ಯಾಯಾಧೀಶೆ, ಬಡತನ ಸಾಧನೆಗೆ ಅಡ್ಡಿಯಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾಧನೆಗೆ ಶ್ರದ್ಧೆ ಪರಿಶ್ರಮ ಛಲಗಳು ಮುಖ್ಯವೇ ಹೊರತು ಹಣವಲ್ಲ. ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ಇಲ್ಲೊಬ್ಬ ತರಕಾರಿ ಮಾರುವವನ ಮಗಳು ಸಾಧಿಸಿ ತೋರಿಸಿದ್ದಾಳೆ. ಮಧ್ಯ ಪ್ರದೇಶದ ಸಿವಿಲ್‌ ಜಡ್ಜ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಕಿರಿಯ ವಯಸ್ಸಿನಲ್ಲಿ ನ್ಯಾಯಾಧೀಶೆಯಾಗಿ ಹೊರಹೊಮ್ಮಿದ್ಧಾಳೆ.
ಇಂದೋರ್‌ ನ ತರಕಾರಿ ಮಾರಾಟಗಾರ ಅಶೋಕ್‌ ನಾಗರ್‌ ನ ಪುತ್ರಿ ಅಂಕಿತಾ ನಾಗರ್‌ ಪರೀಕ್ಷೆಯಲ್ಲಿ 5 ನೇ ರ್ಯಾಂಕ್‌ ಪಡೆದು ಸಾಧಕರಿಗೆ ಸ್ಫೂರ್ತಿಯಾಗಿದ್ಧಾಳೆ.

“ಎಲ್ಲರೂ ಸವಲತ್ತುಗಳಿಲ್ಲವೆಂದು ಕೊರಗುತ್ತಾ ಕೂರುತ್ತಾರೆ. ಅವರಿಗೆಲ್ಲ ನಾನು ಕೊರಗುವ ಬದಲು ಗುರಿಯ ಕಡೆ ಹೆಚ್ಚಿನ ಗಮನ ಕೊಡಿ ಎಂದು ಹೇಳಬಯಸುತ್ತೇನೆ. ನಾನೂ ಕೂಡ ಬಡತನವನ್ನು ಎದುರಿಸಿದ್ದೇನೆ. ಶ್ರದ್ಧೆ ಛಲಗಳಿದ್ದರೆ ಯಾವುದೂ ಅಸಾಧ್ಯವಲ್ಲ. ಬಡತನ ಸಾಧನೆಗೆ ಅಡ್ಡಿಯಾಗುವುದಿಲ್ಲ” ಎನ್ನುತ್ತಾಳೆ ನ್ಯಾಯಾಧೀಶೆ ಅಂಕಿತಾ.

“ನನಗೆ ವೈದ್ಯೆಯಾಗ ಬೇಕೆಂಬ ಕನಸಿತ್ತು, ಆದರೆ ಆರ್ಥಿಕ ಕಾರಣಗಳಿಂದ ಮಾಡಲಾಗಲಿಲ್ಲ. ನಂತರ ಸಿವಿಲ್‌ ಜಡ್ಜ್‌ ಪರೀಕ್ಷೆಗೆ ತಯಾರಿ ಆರಂಭಿಸಿದೆ. ಸರ್ಕಾರದಿಂದ ಸ್ಕಾಲರ್‌ ಶಿಪ್‌ ಬರುತ್ತಿದ್ದರೂ ಅದು ಸಾಲುತ್ತಿರಲಿಲ್ಲ. ಆದರೆ ನನ್ನ ತಂದೆತಾಯಿಯವರು ತರಕಾರಿ ಮಾರಿ ಅದರಿಂದ ಉಳಿಸಿದ ಹಣದಿಂದ ನನಗೆ ಓದಲು ಪ್ರೋತ್ಸಾಹಿಸಿದರು. ಸಂಬಂಧಿಕರೆಲ್ಲರೂ ಮದುವೆಗೆ ಒತ್ತಾಯ ಮಾಡುತ್ತಿದ್ದರೂ ನನ್ನ ತಂದೆತಾಯಿ ಬೆನ್ನೆಲುಬಾಗಿ ನಿಂತರು. ಅವರ ಪ್ರೋತ್ಸಾಹದೊಂದಿಗೆ ನಾನು ಕಠಿಣ ಪರಿಶ್ರಮದಿಂದ ಓದಿದೆ. ಲಾಕ್‌ ಡೌನ್‌ ಸಮಯದಲ್ಲಿ ಆರ್ಥಿಕವಾಗಿ ತೊಂದರೆಯಾಯಿತು ಆದರೆ ನಾನು ಆ ಸಮಯದ ಸದುಪಯೋಗ ಮಾಡಿಕೊಂಡೆ. ಹಾಗಾಗಿ ಈ ಸಾಧನೆ ಸಾಧ್ಯವಾಯಿತು” ಎಂದು ಅಂಕಿತಾ ಹೇಳುತ್ತಾಳೆ.

ಅಂದ ಹಾಗೆ ಅಂಕಿತಾ ಈ ಕುಟುಂಬದ ಎರಡನೆಯವಳು. ಅಂಕಿತಾ ತಂದೆತಾಯಿಗಳಿಗೆ ಇನ್ನೂ ಇಬ್ಬರು ಮಕ್ಕಳಿದ್ದಾರೆ. ಅವಳ ಶ್ರೇಯಸ್ಸಿನ ಅರ್ಧಭಾಗ ತರಕಾರಿ ಮಾರಾಟದಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟಿರುವ ಅವಳ ತಂದೆತಾಯಿಗೂ ಸಲ್ಲುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!