Wednesday, January 14, 2026
Wednesday, January 14, 2026
spot_img

ಮದುವೆ ಸಂಭ್ರಮ ಮುಗಿಸಿ ಮರಳುವಾಗ ವಿಧಿ ಅಟ್ಟಹಾಸ: ಭೀಕರ ಅಪಘಾತಕ್ಕೆ ಮೂವರು ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆ ಸಮಾರಂಭ ಮುಗಿಸಿಕೊಂಡು ಸಂಭ್ರಮದಿಂದ ಮನೆಗೆ ಮರಳುತ್ತಿದ್ದ ಕುಟುಂಬವೊಂದಕ್ಕೆ ವಿಧಿ ಅಡ್ಡಬಂದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಸ್ವಿಫ್ಟ್ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ಫಾತಿಮಾ (76), ಮೊಮ್ಮಕ್ಕಳಾದ ರಿಹಾನ್ (15) ಮತ್ತು ರಾಹಿಲ್ (9) ಮೃತಪಟ್ಟ ದುರ್ದೈವಿಗಳು. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು, ಹರಟೆ ಹೊಡೆಯುತ್ತಾ ಶೃಂಗೇರಿಗೆ ವಾಪಸ್ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಸ್ವಿಫ್ಟ್ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗೆ ಸಿಲುಕಿದ್ದವರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಕಾರಿನಲ್ಲಿದ್ದ ಚಾಲಕ ಸೇರಿದಂತೆ ಇನ್ನು ಮೂವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Most Read

error: Content is protected !!