Monday, December 4, 2023

Latest Posts

ಮಡಿಕೇರಿಯಲ್ಲಿ ಬರೆ ಕುಸಿತಕ್ಕೆ ಮೂವರು ಕಾರ್ಮಿಕರು ಸಾವು: ರಾಜ್ಯ ಸರ್ಕಾರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ

ಹೊಸದಿಗಂತ ವರದಿ, ಮಡಿಕೇರಿ:

ಮಡಿಕೇರಿಯಲ್ಲಿ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತದಿಂದ ಮೃತಪಟ್ಟ ಕಾರ್ಮಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.

ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಸಂದರ್ಭ ಬರೆ ಕುಸಿತ ಪ್ರಕರಣದಲ್ಲಿ ಸತ್ತವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಮೃತರನ್ನು ಹಾವೇರಿಯ ಆನಂದ (35), ಹುಬ್ಬಳ್ಳಿಯ ಬಸವ (35) ಹಾಗೂ ಲಿಂಗಪ್ಪ (45) ಎಂದು ಗುರುತಿಸಲಾಗಿದೆ.
ಉಳಿದಂತೆ ಮಂಜು (38) ಹಾಗೂ ರಾಜು (35) ಅವರುಗಳು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಡಿಕೇರಿಯ ಸ್ಟುವರ್ಟ್ ಹಿಲ್’ನ ರೆಡ್’ಕ್ರಾಸ್ ಕಚೇರಿ ಸಮೀಪ ಪ್ರದೀಪ್ ಎಂಬವರಿಗೆ ಸೇರಿದ ಜಾಗದಲ್ಲಿ ತಡೆಗೋಡೆ ನಿರ್ಮಿಸಲು ಮನು ಎಂಬವರು ಗುತ್ತಿಗೆ ಪಡೆದಿದ್ದು, ಈ ಸಂಬಂಧ ತಳಪಾಯ ತೆಗೆಯಲು ಉತ್ತರ ಕರ್ನಾಟಕ ಮೂಲದ 9ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಂಗಳವಾರ ಸಂಜೆ 5.45ರ ಸುಮಾರಿಗೆ ತಳಪಾಯದ ಮೇಲ್ಭಾಗದ 10ಅಡಿ ಎತ್ತರದಿಂದ‌ ಬರೆ ಕುಸಿದಿದ್ದು, ಈ ಸಂದರ್ಭ ಐವರು ಮಣ್ಣಿನಡಿ‌ ಸಿಲುಕಿದ್ದರು. ಆದರೆ ಈ ಪೈಕಿ ರಾಜು ಹಾಗೂ ಮಂಜು ಅವರನ್ನು ಸ್ಥಳದಲ್ಲಿದ್ದವರು ರಕ್ಷಿಸಿದ್ದಾರೆ. ಆದರೆ ಉಳಿದ ಮೂವರ ಮೇಲೆ ಮೂರು ಅಡಿಗೂ ಎತ್ತರದ ಮಣ್ಣು ಬಿದ್ದಿದ್ದರಿಂದ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಜೆಸಿಬಿ ಬಳಸಿ ಭೂಸಮಾಧಿಯಾಗಿದ್ದವರಿಗಾಗಿ ಶೋಧ ನಡೆಸಿದರು. ಆದರೆ ಅವರು ಪತ್ತೆಯಾಗುವಷ್ಟರಲ್ಲೇ ಅಸು ನೀಗಿದ್ದರು.

ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಶಾಸಕ ಮಂಥರ್ ಗೌಡ ಅವರುಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.

ಈ ಘಟನೆ ಕುರಿತಂತೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ಧರಾಮಯ್ಯ ಅವರು, ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತದಿಂದ ಮೃತಪಟ್ಟ ಕಾರ್ಮಿಕರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅಲ್ಲದೇ ಮೃತ ಕಾರ್ಮಿಕರ ಕುಟುಂಬದವರಿಗೆ ತಲಾ 2 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!