ಹೊಸದಿಗಂತ ವರದಿ, ಮಂಡ್ಯ :
ವಿ.ಸಿ. ನಾಲೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್.ನ ನಾತ್‌ಬ್ಯಾಂಕ್ ಬಳಿ ನಡೆದಿದೆ.
ಮೈಸೂರಿನ ಗೌಸಿಯಾನಗರದ ಇಮ್ರಾನ್ ಪುತ್ರಿ ಸೋನು (17), ರಿಜ್ವಾನ್ ಪುತ್ರಿ ಸಿಮ್ರಾನ್ (16) ನಾಸೀರ್ ಪುತ್ರ ಸಿದ್ದೀಶ್ (9) ಎಂಬುವರೇ ಮೃತಪಟ್ಟವರಾಗಿದ್ದಾರೆ.
ಚಿಕ್ಕಾರಳ್ಳಿ ಮಾರಮ್ಮ ಜಾತ್ರೆಗೆಂದು ಸಂಬಂಧಿಕರ ಮನೆಗೆ ಅಜ್ಜಿಯೊಂದಿಗೆ ಆಗಮಿಸಿದ್ದ ಮೂವರು, ಸಮೀಪದ ಕಾಲುವೆಯಲ್ಲಿ ಕೈ ಕಾಲು ತೊಳೆಯಲು ಹೋಗಿದ್ದರು. ಈ ವೇಳೆ ಕಾಲು ಜಾರಿ ಓರ್ವ ನಾಲೆಯೊಳಗೆ ಬಿದ್ದಾಗ ಉಳಿದವರಿಬ್ಬರು ಆತನ ರಕ್ಷಣೆಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮೂವರೂ ನಾಲೆಯೊಳಗೆ ಬಿದ್ದು ಮೃತಪಟ್ಟಿದ್ದಾರೆ.
ನಾಲೆಯ ಮೇಲ್ಬಾಗದಲ್ಲಿ ನಿಂತಿದ್ದ ಅಜ್ಜಿ ತಕ್ಷಣ ಕೂಗಿಕೊಂಡಾಗ ಗ್ರಾಮಸ್ಥರು ಆಗಮಿಸಿ ನಾಲೆಯಲ್ಲಿ ಬಿದ್ದಿದ್ದ ಸೋನು ಮತ್ತು ಸಿದ್ದೀಶ್ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಸಿಮ್ರಾನ್ ದೇಹಕ್ಕಾಗಿ ಶೋಧ ನಡೆದಿದೆ.
ಈ ಸಂಬಂಧ ಕೆ.ಆರ್.ಎಸ್. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.