ನಾಯಿಗಳ ಹುಚ್ಚಾಟದ ದಾಳಿಗೆ ಮೂರು ಕುರಿಗಳು ಬಲಿ, ಎರಡು ಕುರಿಗಳಿಗೆ ಗಾಯ

ಹೊಸದಿಗಂತ ಮಂಡ್ಯ :

ಕುರಿ ಹಿಂಡಿನ ಮೇಲೆ ನಾಯಿಗಳು ದಾಳಿ ನಡೆಸಿ ಮೂರು ಕುರಿಗಳನ್ನು ಬಲಿ ತೆಗೆದುಕೊಂಡಿರುವ ಘಟನೆ ತಾಲೂಕಿನ ಮೊತ್ತಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸೌಭಾಗ್ಯ ಶಿವಲಿಂಗಯ್ಯ ಎಂಬುವರಿಗೆ ಸೇರಿದ ಮೂರು ಕುರಿಗಳು ನಾಯಿಗಳ ದಾಳಿಗೆ ಬಲಿಯಾದರೆ, ಎರಡು ಕುರಿಗಳು ಗಾಯಗೊಂಡಿವೆ.

ಸೌಭಾಗ್ಯ ಅವರು ಗ್ರಾಮದ ಹೊರ ವಲಯದಲ್ಲಿರುವ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಏಕಾಏಕಿ ನಾಯಿಗಳು ದಾಳಿ ನಡೆಸಿ ಮೂರು ಕುರಿಗಳನ್ನು ಬಲಿ ತೆಗೆದುಕೊಂಡಿದ್ದು, ಮತ್ತೆ ಎರಡು ಕುರಿಗಳು ಗಾಯಗೊಂಡಿವೆ. ಇದರಲ್ಲಿ ಒಂದು ಕುರಿ ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಕುರಿಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿರುವ ನಮಗೆ ಆಗಾಗ್ಗೆ ನಾಯಿ ದಾಳಿಯಿಂದ ಸಾಕಿರುವ ಕುರಿಗಳನ್ನು ಕಳೆದುಕೊಳ್ಳುವಂತಾಗಿದೆ. ಕಳೆದ ಬಾರಿಯೂ ಇದೇ ರೀತಿಯ ದುರ್ಘಟನೆ ನಡೆದಿದ್ದು, ಆಗಲೂ ನಾವು ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡಿ ಪರಿಹಾರಕ್ಕೆ ಮನವಿ ಮಾಡಿದ್ದೆವು. ಆದರೆ ಯಾವುದೇ ರೀತಿಯ ಪರಿಹಾರವನ್ನೂ ಕೊಡಲಿಲ್ಲ ಎಂದು ಸೌಭಾಗ್ಯ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಗ್ರಾಮದಲ್ಲಿ ನಮಗೆ ಯಾವುದೇ ಜಮೀನು ಇಲ್ಲ. ಕೇವಲ ಕುರಿ ಸಾಕಾಣಿಕೆಯೇ ಜೀವನ. ಹೀಗಿರುವಾಗ ಕುರಿಗಳು ನಾಯಿ ದಾಳಿಗೆ ಬಲಿಯಾದರೆ ನಮ್ಮ ಬದುಕು ಹೇಗೆ ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ದಯವಿಟ್ಟು ನಾಯಿ ಹಾವಳಿಯನ್ನು ನಿಯಂತ್ರಿಸಿ, ಅವುಗಳನ್ನು ಹಿಡಿದು ಬೇರೆಡೆಗೆ ಸಾಗಿಸಿ, ಇವುಗಳಿಂದ ನಮಗೆ ರಕ್ಷಣೆ ನೀಡಿ ಎಂದು ಅವರು ಪಶು ಪಾಲನಾ ಇಲಾಖಾ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!