ಕಡಬದಲ್ಲಿ ಗುಡುಗು ಸಹಿತ ಗಾಳಿ ಮಳೆ: ಕಾರುಗಳ ಮೇಲೆ ಉರುಳಿದ ಮರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೋಮವಾರ ರಾತ್ರಿಯ ಗುಡುಗು ಸಹಿತ ಗಾಳಿ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಟ್ಟಣ ಸಮೀಪ ಹೆದ್ದಾರಿ ಬದಿಯ ಮರಗಳು ಉರುಳಿ ಎರಡು ಕಾರುಗಳ ಮೇಲೆ ಬಿದ್ದ ಪರಿಣಾಮ ಕಾರುಗಳು ಜಖಂಗೊಂಡ ಹಾಗೂ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಘಟನೆ ಸಂಭವಿಸಿದೆ.

ನೆಟ್ಟಣದ ಕೇಂದ್ರೀಯ ಮರ ಸಂಗ್ರಹಣ ಘಟಕದ ಬಳಿ ಘಟನೆ ಸಂಭವಿಸಿದೆ. ಬಾರೀ ಗಾಳಿಗೆ ಹೆದ್ದಾರಿ ಬದಿಯ ದೂಪದ ಹಲವು ಮರಗಳು ರಸ್ತೆಗೆ ಬಿದ್ದಿದೆ. ಈ ವೇಳೆ ಸಂಚರಿಸುತ್ತಿದ್ದ ನ್ಯಾನೋ ಹಾಗೂ ಒಮ್ನಿ ಕಾರುಗಳ ಮೇಲೆ ಮರ ಬಿದ್ದಿದೆ‌ ಎಂದು ತಿಳಿದುಬಂದಿದೆ.

ಮರ ಕಾರಿನ ಮೇಲ್ಛಾವಣಿಗೆ ಬಿದ್ದು ಸಿಲುಕಿಕೊಂಡಿದೆ. ಕಾರಿನಲ್ಲಿ ಇದ್ದವರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಪೊಲೀಸ್, ಅರಣ್ಯ, ಅಗ್ನಿಶಾಮಕ ದಳ, ಲೋಕೋಪಯೋಗಿ ಇಲಾಖೆ, ಸ್ಥಳೀಯಾಡಳಿತ, ಸ್ಥಳೀಯರ ನೆರವಿನಿಂದ ಮರಗಳ ತೆರವು ಕಾರ್ಯ ನಡೆಸಲಾಗಿದೆ. ತೆರವಿಗೆ ಹರಸಾಹಸ ಪಡಬೇಕಾಯಿತು. ಹಾನಿಗೊಂಡ ಕಾರು ಯಾತ್ರಿಕರದ್ದು ಎಂದು ತಿಳಿದುಬಂದಿದೆ.

ಈ ಭಾಗದಲ್ಲಿ ಹೆದ್ದಾರಿ ಬದಿಯಲ್ಲಿ ದೂಪದ ಮರಗಳು ಅಪಾಯಕಾರಿಯಾಗಿದ್ದು ವರ್ಷಂಪ್ರತಿ ಹೆದ್ದಾರಿಗೆ ಉರುಳುತ್ತಾ, ರಸ್ತೆ ಸಂಚಾರಕ್ಕೆ ತೊಡಕಾಗುತ್ತಿದೆ ಎಂಬ ದೂರು ವ್ಯಕ್ತವಾಗಿದ್ದು, ಅಪಾಯಕಾರಿ ಮರಗಳನ್ನು ಕೂಡಲೇ ಅರಣ್ಯ ಇಲಾಖೆ ತೆರವು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!