ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಪಿಲಿಭಿತ್ ಹುಲಿ ಅಭಯಾರಣ್ಯದಲ್ಲಿ ಹುಲಿಯೊಂದು ಹೆಬ್ಬಾವನ್ನು ತಿಂದ ವಿಡಿಯೋ ವೈರಲ್ ಆಗುತ್ತಿದೆ.
ಸಫಾರಿಗೆ ಆಗಮಿಸಿದ್ದ ಪ್ರವಾಸಿಗರು ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಹುಲಿಯೊಂದು ಹೆಬ್ಬಾವನ್ನು ತಿಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಕಾಡಿನ ರಸ್ತೆಯಲ್ಲಿ ಬೇಟೆ ಅರಸಿ ಬಂದ ಹುಲಿಯೊಂದು ಆಹಾರಕ್ಕಾಗಿ ಅತ್ತ ಇತ್ತ ನೋಡಿದ್ದು ಈ ವೇಳೆ ರಸ್ತೆ ಬದಿಯಲ್ಲಿ ಹೆಬ್ಬಾವು ಕಂಡಿದೆ. ಹತ್ತಿರ ಹೋಗಿ ನೋಡಿದ ಹುಲಿ ಅದನ್ನು ತನ್ನ ಕಾಲಿನಿಂದ ಸ್ಪರ್ಶ ಮಾಡಿದೆ.ಅಷ್ಟು ಹೊತ್ತಿಗಾಗಲೇ ಹಾವು ಸತ್ತಿತ್ತು. ಈ ವೇಳೆ ನೋಡ ನೋಡುತ್ತಲೇ ಹುಲಿ ಹಾವನ್ನು ತಿಂದಿದೆ. ಈ ವಿಡಿಯೋದಲ್ಲಿ ಹುಲಿ ಹಾವನ್ನು ತಿನ್ನುವುದನ್ನು ಮಾತ್ರ ತೋರಿಸಲಾಗಿದೆ.
ಬಳಿಕ ಹಾವನ್ನು ತಿಂದು ಸ್ವಲ್ಪ ಸಮಯದ ನಂತರ ಹುಲಿ ಹುಲ್ಲನ್ನು ತಿನ್ನತೊಡಗಿತು. ಇದರಿಂದ ಪ್ರವಾಸಿಗರು ಅಚ್ಚರಿಗೊಂಡಿದ್ದು, ಇದಾದ ಕೆಲವೇ ಕ್ಷಣಗಳಲ್ಲಿ ಹುಲಿ ವಾಂತಿ ಮಾಡಿಕೊಳ್ಳಲಾರಂಭಿಸಿತು.
ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಫಿಲಿಬಿಟ್ ಅರಣ್ಯಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಹುಲಿ ಆರೋಗ್ಯದ ಕುರಿತು ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.