ಹೊಸದಿಗಂತ ವರದಿ ಮಡಿಕೇರಿ:
ದಕ್ಷಿಣ ಕೊಡಗಿನ ವೀರಾಜಪೇಟೆ, ಪೊನ್ನಂಪೇಟೆ ತಾಲೂಕುಗಳಲ್ಲಿ ಕೇಳಿ ಬರುತ್ತಿದ್ದ ಹುಲಿಯ ಘರ್ಜನೆ ಇದೀಗ ಸೋಮವಾರಪೇಟೆ ತಾಲೂಕಿಗೂ ವ್ಯಾಪಿಸಿದೆ.
ಸೋಮವಾರಪೇಟೆ ಬಳಿಯ ಚನ್ನಾಪುರದಲ್ಲಿ ಭಾನುವಾರ ರಾತ್ರಿ ಹುಲಿಯ ದರ್ಶನವಾಗಿದೆ. ಭಾನುವಾರ ರಾತ್ರಿ ಗ್ರಾಮದ ಪ್ರದೀಪ್ ಗಾಂಧಿ ಹಾಗೂ ಎಲ್. ವೆಂಕಟೇಶ್ ಅವರಿಗೆ ವ್ಯಾಘ್ರನ ದರ್ಶನವಾಗಿರುವುದಾಗಿ ಹೇಳಲಾಗಿದ್ದು, ವಿಷಯ ತಿಳಿದ ಉಪ ವಲಯ ಅರಣ್ಯಾಧಿಕಾರಿ ಸೂರ್ಯ ಅವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುವುದರೊಂದಿಗೆ ಹುಲಿಯ ಹೆಜ್ಜೆ ಇರುವುದನ್ನು ದೃಢಪಡಿಸಿದ್ದಾರೆ. ವ್ಯಾಘ್ರ ದರ್ಶನದ ಹಿನ್ನೆಲೆಯಲ್ಲಿ ಗೌಡಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.